ನವದೆಹಲಿ: ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯ ಆರ್ಥಿಕ ಸಲಹಾಗಾರರ ಕಚೇರಿಯು ಪ್ರಸಕ್ತ ಮೇ 2020 (ತಾತ್ಕಾಲಿಕ) ಹಾಗೂ ಮಾರ್ಚ್ 2020 (ಅಂತಿಮ)ರ ಸಗಟು ಮಾರಾಟ ಬೆಲೆ ಸೂಚ್ಯಂಕ ಅಂಕಿ ಅಂಶಗಳನ್ನು ಪ್ರಕಟಿಸಿದೆ. ಸಗಟು ಮಾರಾಟ ಸೂಚ್ಯಂಕದ ತಾತ್ಕಾಲಿಕ ಅಂಕಿ ಸಂಖ್ಯೆಗಳನ್ನು ಪ್ರತಿ ತಿಂಗಳ 14 ರಂದು (ಅಥವಾ ಮುಂದಿನ ಕೆಲಸದ ದಿನದಂದು) ಪ್ರಕಟಿಸಲಾಗುತ್ತದೆ. ಇದರ ನಂತರ 10 ವಾರಗಳ ಬಳಿಕ ಸೂಚ್ಯಂಕವನ್ನು ಅಂತಿಮಗೊಳಿಸಿ ಅಂಕಿ ಸಂಖ್ಯೆಗಳನ್ನು ನಿಖರವಾಗಿ ಪ್ರಕಟಿಸಲಾಗುತ್ತದೆ. ಏಪ್ರಿಲ್ 2020ರ ಅಂಕಿ ಅಂಶಗಳು ಸಂಪೂರ್ಣವಾಗಿ ಲಭ್ಯವಿಲ್ಲದ ಕಾರಣ ಮೇ 2020ರ (ತಾತ್ಕಾಲಿಕ) ಅಂಕಿ ಸಂಖ್ಯೆಗಳನ್ನು ಮಾರ್ಚ್ 2020ರ ಅಂತಿಮ ಅಂಕಿ ಸಂಖ್ಯೆಗಳೊಂದಿಗೆ ಹೋಲಿಕೆ ಮಾಡಲಾಗುತ್ತಿದೆ.
2020 ರ ಮೇ ತಿಂಗಳಿನ 'ಎಲ್ಲಾ ಸರಕುಗಳ' (ಮೂಲ: 2011-12 = 100) ಅಧಿಕೃತ ಸಗಟು ಬೆಲೆ ಸೂಚ್ಯಂಕವು 2020 ರ ಮಾರ್ಚ್ ತಿಂಗಳಲ್ಲಿದ್ದ 120.4 (ಅಂತಿಮ) ದಿಂದ (-2.24%) 117.7 (ತಾತ್ಕಾಲಿಕ) ಕ್ಕೆ ಇಳಿದಿದೆ. ಮಾಸಿಕ ಡಬ್ಲ್ಯುಪಿಐ ಆಧಾರಿತ ವಾರ್ಷಿಕ ಹಣದುಬ್ಬರ ದರವು 2020 ರ ಮೇ ತಿಂಗಳಿಗೆ (-3.21%) (ತಾತ್ಕಾಲಿಕ) ಕ್ಕೆ ಇಳಿಕೆಯಾಗಿದೆ. (ಹಿಂದಿನ ವರ್ಷ ಇದೇ ತಿಂಗಳಲ್ಲಿದ್ದ 2.79% ಕ್ಕೆ ಹೋಲಿಸಿದರೆ).
ಪ್ರಾಥಮಿಕ ಸರಕುಗಳು: ಈ ಪ್ರಮುಖ ಗುಂಪಿನ ಸೂಚ್ಯಂಕವು 2020 ರ ಮಾರ್ಚ್ ತಿಂಗಳಲ್ಲಿದ್ದ 137.4 (ಅಂತಿಮ) ದಿಂದ ಮೇ 2020 ರಲ್ಲಿ (-0.87%) 136.2 (ತಾತ್ಕಾಲಿಕ) ಕ್ಕೆ ಇಳಿದಿದೆ. ಆಹಾರ ಸರಕುಗಳ ಬೆಲೆಗಳು (0.73%) ಹೆಚ್ಚಾಗಿದ್ದು, ಮಾರ್ಚ್ 2020 ಕ್ಕೆ ಹೋಲಿಸಿದರೆ, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ (-23.18%) ಮತ್ತು ಆಹಾರೇತರ ಸಾಮಗ್ರಿಗಳ ಬೆಲೆಗಳು (-1.44%) ಕುಸಿದಿವೆ.
ಇಂಧನ ಮತ್ತು ವಿದ್ಯುತ್: ಈ ಗುಂಪಿನ ಸೂಚ್ಯಂಕವು ಮಾರ್ಚ್ 2020ರ 99.5 (ಅಂತಿಮ) ದಿಂದ ಇಳಿಕೆಯಾಗಿ 2020 ರ ಮೇ ತಿಂಗಳಲ್ಲಿ 83.7 (ತಾತ್ಕಾಲಿಕ) ತಲುಪಿವೆ. ಖನಿಜ ತೈಲಗಳ ಗುಂಪಿನ ಬೆಲೆಗಳು ಮಾರ್ಚ್, 2020 ಹೋಲಿಸಿದರೆ -30.10% ಕಡಿಮೆಯಾಗಿವೆ. ಕಲ್ಲಿದ್ದಲು ಮತ್ತು ವಿದ್ಯುತ್ ಬೆಲೆಗಳು ಬದಲಾಗಿಲ್ಲ.
ತಯಾರಿಸಿದ ಉತ್ಪನ್ನಗಳು: ಈ ಸೂಚ್ಯಂಕವು 2020 ರ ಮಾರ್ಚ್ ತಿಂಗಳಲ್ಲಿದ್ದ 118.6 (ಅಂತಿಮ) ದಿಂದ 2020 ರ ಮೇ ತಿಂಗಳಲ್ಲಿ (-0.42%) 118.1 (ತಾತ್ಕಾಲಿಕ) ಕ್ಕೆ ಇಳಿದಿದೆ.
ಡಬ್ಲ್ಯುಪಿಐ ಆಹಾರ ಸೂಚ್ಯಂಕ: ಪ್ರಾಥಮಿಕ ಆಹಾರ ಸಾಮಗ್ರಿಗಳ ಸೂಚ್ಯಂಕವು ತಾತ್ಕಾಲಿಕವಾಗಿ 2020 ರ ಮಾರ್ಚ್‌ನಲ್ಲಿದ್ದ 145.7 ರಿಂದ 2020 ಮೇನಲ್ಲಿ 146.1 ಕ್ಕೆ ಏರಿದೆ. ಡಬ್ಲ್ಯುಪಿಐ ಆಧಾರಿತ ವಾರ್ಷಿಕ ಹಣದುಬ್ಬರ ದರ ಆಹಾರ ಸೂಚ್ಯಂಕವು 2020 ರ ಮಾರ್ಚ್‌ನಲ್ಲಿ 5.20% ಇದ್ದದ್ದು 2020 ರ ಮೇ ತಿಂಗಳಲ್ಲಿ 2.31% ಕ್ಕೆ ಇಳಿದಿದೆ.