ನವದೆಹಲಿ: ಕೋವಿಡ್ -19 ಸೋಂಕು ಬಿಕ್ಕಟ್ಟಿನ ಮಧ್ಯೆ ಜನರ ಕಷ್ಟವನ್ನು ತಗ್ಗಿಸಲು ಬ್ಯಾಂಕ್ ಠೇವಣಿಯ ಬಡ್ಡಿ ಆದಾಯದ ಮೇಲೆ ಮೂಲದಲ್ಲಿಯೇ ತೆರಿಗೆ ಕಡಿತ ವಿನಾಯಿತಿ ಪಡೆಯಲು ಅರ್ಜಿ ಸಲ್ಲಿಕೆಯ ವಾಯ್ದೆಯನ್ನು ಮುಂದೂಡಲಾಗಿದೆ.
ಬಡ್ಡಿ ಆದಾಯದ ಮೇಲೆ ಟಿಡಿಎಸ್‌ನಿಂದ ವಿನಾಯಿತಿ ಪಡೆದಿರುವುದಕ್ಕಾಗಿ ಆದಾಯ ತೆರಿಗೆ ಇಲಾಖೆ ಜೂನ್ 30ರ ನಂತರ ಪ್ರಸಕ್ತ ಹಣಕಾಸು ವರ್ಷದಲ್ಲಿ ಫಾರ್ಮ್ 15 ಜಿ ಮತ್ತು 15 ಹೆಚ್ ಸಲ್ಲಿಸಲು ಅವಕಾಶ ನೀಡಿದೆ. ತೆರಿಗೆ ವಿಧಿಸಬಹುದಾದ ಮಿತಿಗಿಂತ ಕಡಿಮೆ ಇರುವ ವ್ಯಕ್ತಿಗಳು ಈ ಅರ್ಜಿ ಸಲ್ಲಿಸುತ್ತಾರೆ. ತೆರಿಗೆದಾರರು ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳಿಗೆ ಏಪ್ರಿಲ್‌ನಲ್ಲಿ ಸಲ್ಲಿಸುತ್ತಾರೆ.
ಕೋವಿಡ್ -19 ಸಾಂಕ್ರಾಮಿಕ ರೋಗವು ಬಹುತೇಕ ಎಲ್ಲ ವಲಯಗಳ ಕೆಲಸದ ಮೇಲೆ ತೀವ್ರ ಅಡ್ಡಿ ಉಂಟುಮಾಡಿದೆ. ಕಳೆದ ಹಣಕಾಸು ವರ್ಷದಲ್ಲಿ ಸಲ್ಲಿಸಿದ 15 ಜಿ ಮತ್ತು 15 ಹೆಚ್ ಫಾರ್ಮ್‌ಗಳು 2020ರ ಜೂನ್ 30 ರವರೆಗೆ ಮಾನ್ಯವಾಗಿರುತ್ತವೆ ಎಂದು ಕೇಂದ್ರ ನೇರ ತೆರಿಗೆ ಮಂಡಳಿ (ಸಿಬಿಡಿಟಿ) ಆದೇಶದಲ್ಲಿ ತಿಳಿಸಿದೆ. ಬಿಕ್ಕಟ್ಟಿನಂತಹ ಪರಿಸ್ಥಿತಿಯಲ್ಲಿ ಕೆಲವು ವ್ಯಕ್ತಿಗಳಿಗೆ ಸಮಯಕ್ಕೆ ಸರಿಯಾಗಿ ಫಾರ್ಮ್ ಸಲ್ಲಿಸಲು ಸಾಧ್ಯವಾಗದಿರಬಹುದು. ತೆರಿಗೆ ಹೊಣೆಗಾರಿಕೆ ಇಲ್ಲದಿದ್ದರೂ ಸಹ ಟಿಡಿಎಸ್ ಕಡಿತ ಆಗಲಿದೆ ಎಂದು ಹೇಳಿದೆ.
2019-20ನೇ ಹಣಕಾಸು ವರ್ಷಕ್ಕೆ ಬ್ಯಾಂಕ್‍ಗಳು ಅಥವಾ ಇತರ ಸಂಸ್ಥೆಗಳಿಗೆ 15 ಜಿ ಮತ್ತು 15 ಹೆಚ್ ಫಾರ್ಮ್ ಸಲ್ಲಿಸಿದ್ದರೆ, 2020-21ನೇ ಸಾಲಿಗೆ 2020ರ ಜೂನ್ 30ರವರೆಗೆ ಮಾನ್ಯವಾಗಿರುತ್ತದೆ. ಫಾರ್ಮ್ 15 ಹೆಚ್ ಹಿರಿಯ ನಾಗರಿಕರು ಸಲ್ಲಿಸಿದರೇ ತೆರಿಗೆ ವಿಧಿಸಬಹುದಾದ ಆದಾಯವು ವಿನಾಯಿತಿ ಮಿತಿಗಿಂತ ಕಡಿಮೆ ಇರುವ ವ್ಯಕ್ತಿಯು 15 ಜಿ ಸಲ್ಲಿಸಬಹುದು.
ಯಾರಿಗೆ ಫಾರಂ 15ಜಿ ಹಾಗೂ 15ಎಚ್
ತೆರಿಗೆದಾರ 60 ವರ್ಷದೊಳಗಿನ ವ್ಯಕ್ತಿಗಳಾಗಿದ್ದು, ಎಲ್ಲ ಮೂಲಗಳಿಂದ ಬರುವ ಒಟ್ಟು ಬಡ್ಡಿ ಆದಾಯವೂ ಸೇರಿ ತಮ್ಮ ಒಟ್ಟು ನಿವ್ವಳ ಆದಾಯ ₹ 2.50 ಲಕ್ಷಗಳಿಗಿಂತ ಕಡಿಮೆ ಇದ್ದು ನಿರೀಕ್ಷಿತ ತೆರಿಗೆ ಶೂನ್ಯವಾಗಿದ್ದರೆ, ಫಾರಂ 15ಜಿ ತುಂಬಿಬಿಟ್ಟು ಬ್ಯಾಂಕ್‌ಗಳಿಗೆ ಕೊಡಬೇಕಾಗುತ್ತದೆ. ಈ ಸ್ವಯಂ ಘೋಷಿತ ದಾಖಲೆಯ ಆಧಾರದ ಮೇಲೆ ಬ್ಯಾಂಕ್‍ಗಳು ತೆರಿಗೆ ಕಡಿತಗೊಳಿಸುವ ಅಗತ್ಯವಿರುವುದಿಲ್ಲ.
ರೂ. 5 ಲಕ್ಷದವರೆಗೆ ತೆರಿಗೆಗೆ ಒಳಪಡುವ ಆದಾಯ ಹೊಂದಿದ ಹಿರಿಯ ನಾಗರಿಕರು ಟಿಡಿಎಸ್ (ಮೂಲದಲ್ಲಿಯೇ ತೆರಿಗೆ ಕಡಿತ) ವಿನಾಯಿತಿ ಪಡೆಯಬಹುದು.
ಏನಿದು ಟಿಡಿಎಸ್?
ಟ್ಯಾಕ್ಸ್ ಡಿಡಕ್ಟೆಡ್ ಆಟ್ ಸೋರ್ಸ್ (ಟಿಡಿಎಸ್) ತೆರಿಗೆ ಸಂಗ್ರಹದ ಉದ್ದೇಶ ಹೊಂದಿದ್ದು, ಹೆಸರೇ ಸೂಚಿಸುವಂತೆ ಇದು ಮೂಲದಲ್ಲಿಯೇ ತೆರಿಗೆ ಕಡಿತ ಮಾಡುವ ವ್ಯವಸ್ಥೆಯಾಗಿದೆ. ಉದ್ಯೋಗದಾತ ಸಂಸ್ಥೆಗಳು ತಮ್ಮ ನೌಕರರಿಗೆ ವೇತನ ಪಾವತಿಸುವ ಸಂದರ್ಭ ಆದಾಯ ತೆರಿಗೆಯನ್ನು ಕಡಿತಗೊಳಿಸುವುದು ಕಡ್ಡಾಯವಾಗಿದ್ದು, ನೇರವಾಗಿ ಕೇಂದ್ರ ಸರ್ಕಾರದ ಆದಾಯ ಇಲಾಖೆಗೆ ಪಾವತಿಸುತ್ತಾರೆ.