ನವದೆಹಲಿ: ಕೊರೊನಾ ವೈರಸ್ ಲಾಕ್ಡೌನ್ ಕಾರಣದಿಂದ ದೇಶದ ಆರ್ಥಿಕ ವ್ಯವಸ್ಥೆ ಹದಗೆಟ್ಟಿದ್ದು, ಈ ನಿಟ್ಟಿನಲ್ಲಿ ಸಮಾಜದ ವಿವಿಧ ವರ್ಗಗಳಿಗೆ ನಿನ್ನೆ ಪ್ರಧಾನಿ ಮೋದಿ ಅವರು 20 ಲಕ್ಷ ಕೋಟಿ ರೂ. ಪರಿಹಾರ ಪ್ಯಾಕೇಜ್ ಘೋಷಿಸಿದ್ದರು. ಇದು ಕೆಲವು ಮುಂದುವರಿದ ರಾಷ್ಟ್ರಗಳ ಆರ್ಥಿಕತೆಗಿಂತ ಅಧಿಕವಾಗಿದೆ.
ದೊಡ್ಡ ಪ್ರಮಾಣದ ಜಾಗತಿಕ ಹೂಡಿಕೆಯನ್ನು ಆಕರ್ಷಿಸಲು ಎನ್ಡಿಎ ಸರ್ಕಾರ ಸಂಪೂರ್ಣ ಮಾರ್ಗಸೂಚಿಯನ್ನು ಸಿದ್ಧಪಡಿಸುತ್ತಿದೆ. ಈ ಬಿಕ್ಕಟ್ಟು ಭಾರತವನ್ನು ಸಂಪೂರ್ಣವಾಗಿ ಪರಿವರ್ತಿಸಲಿದೆ. ಸ್ವಾವಲಂಬನೆಯ ಸಂದೇಶವು ಬಹುತೇಕ ಉತ್ಪಾದನೆ ಮತ್ತು ಉತ್ಪಾದನೆ ಘಟಕಗಳು ಭಾರತಕ್ಕೆ ಸ್ಥಳಾಂತರಗೊಳ್ಳುವಂತೆ ಮಾಡಲಿದೆ ಎಂದು ಉದ್ಯಮ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಹಾಗೂ ಲಾಕ್ಡೌನ್ನಿಂದ ಅತ್ಯಧಿಕ ಪ್ರಮಾಣದಲ್ಲಿ ಆರ್ಥಿಕ ಪ್ಯಾಕೇಜ್ ನೀಡಿರುವ ರಾಷ್ಟ್ರಗಳ ಸಾಲಿನಲ್ಲಿ ಜಪಾನ್ ಪ್ರಥಮ ಸ್ಥಾನದಲ್ಲಿದೆ. ಒಟ್ಟಾರೆ ಜಿಡಿಪಿಯ ಪೈಕಿ ಶೇ 21.1ರಷ್ಟು ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಇದರ ಬಳಿಕ ಸ್ಥಾನದಲ್ಲಿ ಅಮೆರಿಕ ಇದ್ದು, ತನ್ನ ಜಿಡಿಪಿಯಲ್ಲಿ ಶೇ 12ರಷ್ಟು ಉತ್ತೇಜನ ಪ್ಯಾಕೇಜ್ ಪ್ರಕಟಿಸಿದೆ.
ಸ್ವೀಡನ್ ಶೇ 12ರಷ್ಟು, ಜರ್ಮನಿ ಶೇ 10.7ರಷ್ಟು, ಭಾರತ ಶೇ 10ರಷ್ಟು, ಫ್ರಾನ್ಸ್ ಶೇ 9.3ರಷ್ಟು, ಸ್ಪೇನ್ ಶೇ 7.3ರಷ್ಟು, ಇಟಲಿ ಶೇ 5.7ರಷ್ಟು, ಇಂಗ್ಲೆಂಡ್ ಶೇ 5ರಷ್ಟು, ಚೀನಾ ಶೇ 3.8ರಷ್ಟು ಹಾಗೂ ದಕ್ಷಿಣ ಕೊರಿಯಾ ಶೇ 2.2ರಷ್ಟು ಪರಿಹಾರ ಪ್ಯಾಕೇಜ್ ಹೊರಡಿಸಿವೆ.
ಮಾರ್ಚ್ ಅಂತ್ಯದಲ್ಲಿ ಕೇಂದ್ರ ಸರ್ಕಾರ 1.7 ಲಕ್ಷ ಕೋಟಿ ರೂ. ಹಣಕಾಸಿನ ಕ್ರಮಗಳನ್ನು ಘೋಷಿಸಿದ್ದರೆ, ಆರ್‌ಬಿಐ ಮಾರ್ಚ್‌ನಲ್ಲಿ 3.7 ಲಕ್ಷ ಕೋಟಿ ರೂ. ಮತ್ತು ಏಪ್ರಿಲ್‌ನಲ್ಲಿ 2 ಲಕ್ಷ ಕೋಟಿ ರೂ.ಯಷ್ಟು ಮಾರುಕಟ್ಟೆಗೆ ನಗದು ಘೋಷಿಸಿತು.