ನವದೆಹಲಿ: ತೀವ್ರವಾಗಿ ಕುಸಿಯುತ್ತಿರುವ ವಾಹನೋದ್ಯಮದ ಪುನಶ್ಚೇತನಕ್ಕೆ ಸರಕು ಮತ್ತು ಸೇವಾ ತೆರಿಗೆಯಲ್ಲಿ (ಜಿಎಸ್‌ಟಿ) ವಿನಾಯಿತಿ ನೀಡುವಂತೆ ಉದ್ಯಮಿಗಳು ಕೇಂದ್ರದ ಮೇಲೆ ಒತ್ತಡ ಹಾಕುತ್ತಿದ್ದಾರೆ.
ಉದ್ಯಮಿಗಳ ಬೇಡಿಕೆಗೆ ಕೇಂದ್ರ ಸರ್ಕಾರ ಮಣಿಯುವಂತೆ ಕಾಣುತ್ತಿದೆ. ಮುಂದೆ ನಡೆಯಲಿರುವ ಜಿಎಸ್‌ಟಿ ಮಂಡಳಿಯ ಸಭೆಯಲ್ಲಿ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿ ಅಂತಿಮ ತೀರ್ಮಾನ ತಿಳಿಸುವುದಾಗಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
ಒಂದು ವೇಳೆ ವಾಹನೋದ್ಯಮದ ಸರುಕುಗಳ ಮೇಲೆ ವಿಧಿಸಲಾದ ಜಿಎಸ್‌ಟಿ ಸ್ಲ್ಯಾಬ್ ಇಳಿಕೆಯಾದರೆ ಆ ಮೂಲದಿಂದ ಬರಬೇಕಾದ ಆದಾಯ ಸರಿದೂಗಿಸಲು ಬದಲಿ ಸರಕುಗಳ ಮೇಲೆ ತೆರಿಗೆ ಏರಿಕೆ ಆಗಬಹುದು. ಮದ್ಯ, ಐಷಾರಾಮಿ ಕಾರು, ತಂಬಾಕು, ತಂಪು ಪಾನೀಯ ಸೇರಿದಂತೆ ಇತರೆ ಕೆಲ ಆಯ್ದ ಉತ್ಪನ್ನಗಳು ತುಟ್ಟಿಯಾಗಲಿವೆ.
ಏಕರೂಪದ ತೆರಿಗೆಯ ಬಳಿಕ ಆದಾಯ ಕಡಿತದ ಪ್ರತಿಯಾಗಿ ಕೇಂದ್ರದಿಂದ ರಾಜ್ಯಗಳು ಪಡೆಯುವ ಆದಾಯದ ನಷ್ಟ ಪರಿಹಾರ ಮೊತ್ತದ ಒಂದು ಭಾಗ ತ್ಯಜಿಸಬೇಕಾಗುತ್ತದೆ. ವಾರ್ಷಿಕ ಆದಾಯದ ಏರಿಕೆ ಶೇ 14ಕ್ಕಿಂತ ಕಡಿಮೆಯಿದ್ದರೆ, 5 ವರ್ಷಗಳ ಕಾಲ ರಾಜ್ಯಗಳಿಗೆ ಪರಿಹಾರ ನೀಡಲು ಕೇಂದ್ರವು ಸಮ್ಮತಿಸಿತ್ತು. ಕಾನೂನಾತ್ಮಕವಾಗಿ ಸೆಸ್ ಹರಿವಿನ ನಿಧಿಯಿಂದ ಮಾತ್ರ ಪರಿಹಾರ ಪಾವತಿಸುವುದಾಗಿ ಕೇಂದ್ರ ಹೇಳಿದೆ. 2019-20ರ ಅವಧಿಯಲ್ಲಿ ಐಷಾರಾಮಿ ವಸ್ತುಗಳಿಂದ ವಾರ್ಷಿಕ 1 ಲಕ್ಷ ಕೋಟಿ ರೂ. ಅಥವಾ ಮಾಸಿಕ ಸುಮಾರು 8,000 ಕೋಟಿ ರೂ. ಸಂಗ್ರಹಿಸುವ ಗುರಿ ಇರಿಸಿಕೊಂಡಿದೆ. ಆಗಸ್ಟ್‌ನಲ್ಲಿ ಐಷಾರಾಮಿ ವಸ್ತುಗಳ ತೆರಿಗೆಯಿಂದ ₹ 7,273 ಸಂಗ್ರಹವಾಗಿದ್ದು, ನಿರೀಕ್ಷೆಗಿಂತ ಕಡಿಮೆಯಾಗಿದೆ.
ಪ್ರಸಕ್ತ ವರ್ಷದ ಮೊದಲ ನಾಲ್ಕು ತಿಂಗಳು ಕೇಂದ್ರವು ರಾಜ್ಯಗಳಿಗೆ ಪರಿಹಾರವಾಗಿ ₹ 45,784 ಕೋಟಿ ಬಿಡುಗಡೆ ಮಾಡಿದೆ. ಮಾಸಿಕ ಸರಾಸರಿ 11,000 ಕೋಟಿ ರೂ. ಮುಂದುವರಿದರೆ ಕೇಂದ್ರವು ವರ್ಷದಲ್ಲಿ ರಾಜ್ಯಗಳಿಗೆ ₹ 1.3 ಲಕ್ಷ ಕೋಟಿ ರೂ. ನೀಡಬೇಕಾಗುತ್ತದೆ. ಪ್ರಸಕ್ತ ಹಣಕಾಸು ವರ್ಷದ ಕೊನೆಯ ಮೂರು-ನಾಲ್ಕು ತಿಂಗಳುಗಳ ಪರಿಹಾರ ಮೊತ್ತ ತಡೆಹಿಡಿಯುವ ನಿರೀಕ್ಷೆ ಇದೆ. ವಾಹನಗಳ ಮತ್ತು ಆಟೋ ಘಟಕಗಳಿಗೆ ಜಿಎಸ್‌ಟಿ ಸ್ಲ್ಯಾಬ್ ಅನ್ನು ಶೇ 28ರಿಂದ ಶೇ18ಕ್ಕೆ ಇಳಿಸಿದರೆ 55,000- 60,000 ಕೋಟಿ ರೂ. ನಷ್ಟವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದು ಕೇಂದ್ರಕ್ಕೆ ಪರಿಹಾರದ ಹೊರೆಯನ್ನು ಇನ್ನಷ್ಟು ಹೆಚ್ಚಿಸಲಿದೆ. ಇದಕ್ಕೆ ಪರಿಹಾರವಾಗಿ ಪ್ರಸ್ತುತ ಇರುವ ಸೆಸ್ ಮಟ್ಟವನ್ನು ಹೆಚ್ಚಿಸುವುದು ಅಥವಾ ಇಲ್ಲವೆ ಇತರೆ ಸರಕು ಮತ್ತು ಸೇವೆಗಳ ಸ್ಲ್ಯಾಬ್ ದರ ಏರಿಕೆ ಮಾಡುವುದು ಕೇಂದ್ರ ಮುಂದಿರುವ ಆಯ್ಕೆಯಾಗಿದೆ.
ಸೆಪ್ಟೆಂಬರ್ 20 ರಂದು ನಡೆಯಲಿರುವ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಆಟೋ ವಲಯ, ಜವಳಿ, ಫೈಬರ್, ಬಿಸ್ಕತ್ ಮತ್ತು ಎಫ್‌ಎಂಸಿಜಿ ವಲಯದ ಉದ್ಯಮಗಳನ್ನು ಆರ್ಥಿಕ ಹೊಡೆತದಿಂದ ಪಾರುಮಾಡಲು ತೆರಿಗೆ ಕಡಿತಗೊಳಿಸುವ ತೀರ್ಮಾನ ತೆಗೆದುಕೊಳ್ಳುವಂತೆ ಮನವಿ ಮಾಡಿವೆ. ಇದು ಕೇಂದ್ರಕ್ಕೆ ನುಂಗಲಾರದ ತುತ್ತಾಗಿದೆ. ಆರ್ಥಿಕ ಹಿಂಜರಿಕೆಯಿಂದ ಈಗಾಗಲೇ ಹೈರಾಣಾಗಿರುವ ಜನರಿಗೆ ತೆರಿಗೆ ಹೊರೆ ಹಾಕಿದರೆ ಅವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಯಾವುದೇ ಕ್ರಮ ತೆಗೆದುಕೊಳ್ಳದೇ ಕೈಕಟ್ಟಿ ಕುಳಿತರೆ ಉದ್ಯಮಗಳ ಬೆಳವಣಿಗೆಯು ಪಾತಾಳ ಕಾಣಲಿದೆ.