ನವದೆಹಲಿ: ಕೊರೊನಾ ವೈರಸ್ ರೋಗದ ಸಂಕಷ್ಟದಲ್ಲಿದ್ದ ಆರ್ಥಿಕತೆಗೆ ನವಚೈತನ್ಯ ನೀಡುವಂತೆ ಜಿಎಸ್‌ಟಿ ಸಂಗ್ರಹದಲ್ಲಿ ಏರಿಕೆ ಕಂಡು ಬಂದಿದೆ.
ಅಕ್ಟೋಬರ್ ಮಾಸಿಕದಲ್ಲಿ ಸಂಗ್ರಹವಾದ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಮೊತ್ತ 1.05 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ. ಈ ವರ್ಷದ ಫೆಬ್ರವರಿಯ ಬಳಿಕ(ಕೊರೊನಾ) ಮೊದಲ ಬಾರಿಗೆ 1 ಲಕ್ಷ ಕೋಟಿ ರೂ. ಗಡಿದಾಟಿದೆ. ಇದು ಆರ್ಥಿಕ ಚಟುವಟಿಕೆ ಮತ್ತು ಬೇಡಿಕೆಯ ಎತ್ತರದ ಪ್ರತಿಬಿಂಬವಾಗಿದೆ.
2020ರ ಅಕ್ಟೋಬರ್ 31 ತನಕ ಸಲ್ಲಿಸಲಾದ ಒಟ್ಟು ಜಿಎಸ್‌ಟಿಆರ್-3 ಬಿ ರಿಟರ್ನ್‌ಗಳ ಸಂಖ್ಯೆ 80 ಲಕ್ಷದಷ್ಟಿದೆ ಎಂದು ಹಣಕಾಸು ಸಚಿವಾಲಯ ಪ್ರಕಟಣೆಯಲ್ಲಿ ತಿಳಿಸಿದೆ.
2020ರ ಅಕ್ಟೋಬರ್‌ನಲ್ಲಿ ಸಂಗ್ರಹಿಸಿದ ಒಟ್ಟು ಜಿಎಸ್‌ಟಿ ಆದಾಯ 1,05,155 ಕೋಟಿ ರೂ.ನಷ್ಟಿದೆ. ಅದರಲ್ಲಿ ಸಿಜಿಎಸ್‌ಟಿ ಪಾಲು 19,193 ಕೋಟಿ ರೂ., ಎಸ್‌ಜಿಎಸ್‌ಟಿ 5,411 ಕೋಟಿ ರೂ., ಐಜಿಎಸ್‌ಟಿ 52,540 ಕೋಟಿ ರೂ. (ಸರಕುಗಳ ಆಮದಿನ ಸಂಗ್ರಹ 23,375 ಕೋಟಿ ರೂ.) ಮತ್ತು ಸೆಸ್ 8,011 ಕೋಟಿ (ಸರಕು ಆಮದು 932 ಕೋಟಿ ರೂ. ಸೇರಿ) ರೂ.ಗಳಷ್ಟಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಕಳೆದ ವರ್ಷದ ಇದೇ ತಿಂಗಳಲ್ಲಿ ಸಂಗ್ರಹಿಸಿದ 95,379 ಕೋಟಿ ರೂ.ಗಳಿಗಿಂತ ಈ ತಿಂಗಳ ಆದಾಯವು ಶೇ 10ರಷ್ಟು ಏರಿಕೆಯಾಗಿದೆ. ಕೋವಿಡ್ -19 ನಿಯಂತ್ರಕ್ಕೆ ಆರ್ಥಿಕ ಚಟುವಟಿಕೆ ಮೇಲೆ ವಿಧಿಸಲಾಗಿದ್ದ ಲಾಕ್ಡೌನ್ನಿಂದಾಗಿ ಜಿಎಸ್‌ಟಿ ಸಂಗ್ರಹದ ಮಾನಸಿಕ 1 ಲಕ್ಷ ಕೋಟಿ ರೂ. ಗುರಿಗೆ ಹಿನ್ನಡೆ ಆಗಿತ್ತು.
ಫೆಬ್ರವರಿಯಲ್ಲಿ ಜಿಎಸ್‌ಟಿ ಆದಾಯ 1.05 ಲಕ್ಷ ಕೋಟಿ ರೂ., ಮಾರ್ಚ್ 97,597 ಕೋಟಿ ರೂ., ಏಪ್ರಿಲ್ 32,172 ಕೋಟಿ ರೂ., ಮೇ 62,151 ಕೋಟಿ ರೂ., ಜೂನ್ 90,917 ಕೋಟಿ ರೂ., ಜುಲೈ 87,422 ಕೋಟಿ ರೂ., ಆಗಸ್ಟ್ ರೂ. 86,449 ಕೋಟಿ ರೂ. ಮತ್ತು ಸೆಪ್ಟೆಂಬರ್ 95,480 ಕೋಟಿ ರೂ.ನಷ್ಟು ಸಂಗ್ರಹವಾಗಿತ್ತು. 2019-20ರ ಆರ್ಥಿಕ ವರ್ಷದ 12 ತಿಂಗಳಲ್ಲಿ 8 ಬಾರಿ ಜಿಎಸ್‌ಟಿ ಆದಾಯವು 1 ಲಕ್ಷ ಕೋಟಿ ರೂ. ಗಡಿ ದಾಟಿತ್ತು.