ನವದೆಹಲಿ: ಕೇಂದ್ರ ಸರ್ಕಾರ ಘೋಷಿಸಿರುವ ಉತ್ತೇಜನಾ ಪ್ಯಾಕೇಜ್ ಅಸಮರ್ಪಕವಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿರುವ ಕಾಂಗ್ರೆಸ್ ನಾಯಕ, ಕೇಂದ್ರದ ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ, ಸರ್ಕಾರ ಘೋಷಿಸಿರುವ ಆರ್ಥಿಕ ಉತ್ತೇಜನಾ ಪ್ಯಾಕೇಜ್‌ನಲ್ಲಿ ಬಡವರು, ವಲಸಿಗರು, ರೈತರು, ಕಾರ್ಮಿಕರು, ಸಣ್ಣ ವ್ಯಾಪಾರಿಗಳು ಮತ್ತು ಮಾಧ್ಯಮ ವರ್ಗ ಸೇರಿದಂತೆ ಹಲವು ವಲಯಗಳನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದ್ದಾರೆ.
ಆರ್ಥಿಕ ಪ್ಯಾಕೇಜ್ ಅನ್ನು ಮತ್ತೊಮ್ಮೆ ಪರಿಶೀಲಿಸಿ ಪರಿಷ್ಕೃತ ಪ್ಯಾಕೇಜ್ ಘೋಷಿಸಬೇಕು. ಅದು 10 ಲಕ್ಷ ಕೋಟಿ ರೂ.ಗಿಂತ ಅಂದರೆ ಜಿಡಿಪಿಯ ಶೇಕಡಾ 10ರಷ್ಟಕ್ಕಿಂತ ಕಡಿಮೆ ಇರದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಕೆಲ ಸುಧಾರಣೆಗಳನ್ನು ತರಲು ಸರ್ಕಾರ ಅವಕಾಶವಾದಿತನವನ್ನ ಬಳಸಿಕೊಂಡಿದೆ ಎಂದು ಆರೋಪಿಸಿರುವುದಲ್ಲದೇ, ಸಂಸತ್ ಅಧಿವೇಶನ ಕರೆದು ಪ್ಯಾಕೇಜ್ ಕುರಿತು ಚರ್ಚೆ ನಡೆಸಿಬೇಕು. ಆಗ ಇದಕ್ಕೊಂದು ಅರ್ಥ ಸಿಗಲಿದೆ. ಸರ್ಕಾರ ಸಂಸತ್ ಅನ್ನು ಬದಿಗೊತ್ತುವ ಕೆಲಸ ಮಾಡುತ್ತಿದೆ ಎಂದು ನನಗಿಸುತ್ತಿದೆ. ಸಂಸದೀಯ ಮಂಡಳಿ ಸಭೆ ಕರೆದು ಈ ಬಗ್ಗೆ ಚರ್ಚೆ ಮಾಡಬೇಕಿತ್ತು ಎಂದು ಪಿ ಚಿದಂಬರಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.