ನವದೆಹಲಿ: ಈ ವರ್ಷದ ಮೇ ತಿಂಗಳಲ್ಲಿ ಘೋಷಿಸಲಾದ ಪರಿಷ್ಕೃತ ಸಾಲ ಯೋಜನೆಯಂತೆ ತನ್ನ ವೆಚ್ಚದ ಬೇಡಿಕೆ ಪೂರೈಸಲು ಪ್ರಸಕ್ತ ಹಣಕಾಸು ವರ್ಷದ ದ್ವಿತೀಯಾರ್ಧದಲ್ಲಿ (ಅಕ್ಟೋಬರ್-ಮಾರ್ಚ್) 4.34 ಲಕ್ಷ ಕೋಟಿ ರೂ. ಸಾಲ ಮಾಡುವುದಾಗಿ ಹಣಕಾಸು ಸಚಿವಾಲಯ ತಿಳಿಸಿದೆ.
ಈ ವರ್ಷದ ಫೆಬ್ರವರಿಯಲ್ಲಿ ಮಂಡಿಸಿದ ತಮ್ಮ ಪ್ರಥಮ ಪೂರ್ಣ ಬಜೆಟ್‌ನಲ್ಲಿ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು, ಈ ವರ್ಷದ ಸಾಲದ ಪ್ರಮಾಣ 7.8 ಲಕ್ಷ ಕೋಟಿ ರೂ. ಇದೆ ಎಂದು ಅಂದಾಜಿಸಿದ್ದರು. ಆದರೆ, ಕೋವಿಡ್ -19 ಜಾಗತಿಕ ಸಾಂಕ್ರಾಮಿಕ ರೋಗವು ಎಲ್ಲವನ್ನು ಬದಲಾಯಿಸಿತು.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಆದಾಯ ಸಂಗ್ರಹದಲ್ಲಿ ತೀವ್ರ ಕುಸಿತ ಉಂಟಾಯಿತು. ಇದೇ ಸಮಯದಲ್ಲಿನ ಸೋಂಕಿನ ಪ್ರತಿಕೂಲ ಪರಿಣಾಮ ತಗ್ಗಿಸಲು ಹೆಚ್ಚಿನ ಖರ್ಚು ಮಾಡಬೇಕಾಗಿದ್ದರಿಂದ ವಾರ್ಷಿಕ ಸಾಲದ ಶೇ 7.8 ಲಕ್ಷ ಕೋಟಿ ರೂ.ಯಿಂದ 12 ಲಕ್ಷ ಕೋಟಿ ರೂ.ಗೆ ಹೆಚ್ಚಿಸಲು ಸರ್ಕಾರ ನಿರ್ಧರಿಸಿತು.
ಈ ಹಣಕಾಸು ವರ್ಷದಲ್ಲಿ ಸರ್ಕಾರವು 12 ಲಕ್ಷ ಕೋಟಿ ರೂ. ಪರಿಷ್ಕೃತ ಸಾಲ ಗುರಿ ಮೀರಿ ಮುಂದೆ ಹೋಗುವುದಿಲ್ಲ ಎಂದು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ತರುಣ್ ಬಜಾಜ್ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ ಸರ್ಕಾರ ಈಗಾಗಲೇ 7.66 ಲಕ್ಷ ಕೋಟಿ ರೂ. ಎರವಲು ಪಡೆದಿದೆ ಎಂದು ದೃಢಪಡಿಸಿದರು. ಸರ್ಕಾರವು ಬೃಹತ್ ಸಾಲ ಪಡೆಯುವುದು ಮಾರುಕಟ್ಟೆ ಮತ್ತು ಬಡ್ಡಿದರಗಳ ಮೇಲೆ ನೇರ ಪರಿಣಾಮ ಬೀರುತ್ತದೆ.