ನವದೆಹಲಿ: ಕೇಂದ್ರ ಹಣಕಾಸು ಸಚಿವಾಲಯ ಕಳೆದ ವರ್ಷ ಉದ್ದೇಶಿತ ಗುರಿಯ ತೆರಿಗೆ ಸಂಗ್ರಹ ಮೊತ್ತ ತಲುಪಲು ಇನ್ನಿಲ್ಲದ ಕಸರತ್ತು ನಡೆಸಿದ್ದರೂ ವಿಫಲವಾಗಿತ್ತು. ಇದರಿಂದ ಎಚ್ಚೆತ್ತುಕೊಂಡು ಆರಂಭಿಕ ಹಣಕಾಸು ವರ್ಷದಿಂದ ತೆರಿಗೆ ಸಂಗ್ರಹಕ್ಕೆ ಮುಂದಾಗಿದೆ.
ಈ ವರ್ಷ ಯಾವುದೇ ಪ್ರಮಾದಗಳಿಗೆ ಎಡೆಮಾಡಿಕೊಡದೆ 2019-20ರ ಹಣಕಾಸು ವರ್ಷದ ಆರಂಭದಿಂದಲೇ ತೆರಿಗೆ ಬೇಟೆಗೆ ಮುಂದಾಗಿದೆ. ಪ್ರಸಕ್ತ ಹಣಕಾಸು ವರ್ಷದ ಮೊದಲ ತಿಂಗಳಲ್ಲಿ ಶತ್ರುಗಳ ಆಸ್ತಿ ಕಾಯ್ದೆಯನ್ನು (ಎನಿಮಿ ಪ್ರಾಪರ್ಟಿ ಆ್ಯಕ್ಟ್) ಬಳಸಿಕೊಂಡು ಏಪ್ರಿಲ್ ತಿಂಗಳಲ್ಲಿ ಶತೃು ರಾಷ್ಟ್ರಗಳ ಪ್ರಜೆಗಳಿಗೆ ಸೇರಿದ್ದ ₹ 1,874 ಕೋಟಿ ಮೌಲ್ಯದ ಆಸ್ತಿಯನ್ನು ಮಾರಾಟ ಮಾಡಿದೆ.
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ನ (ಆರ್ವಿಎನ್ಎಲ್) ₹ 476 ಕೋಟಿ ಹಾಗೂ ಶತ್ರು ಆಸ್ತಿ ಮಾರಾಟ ಮೌಲ್ಯ ₹ 1,874 ಕೋಟಿ ಸೇರಿ ಒಟ್ಟು ₹ 2,350 ಕೋಟಿ ಖಜಾನೆ ಸೇರಿದೆ ಎಂದು ಡಿಐಪಿಎಎಂ ವೆಬ್ಸೈಟ್ನಲ್ಲಿ ಪ್ರಕಟವಾಗಿದೆ.
ಪಾಕಿಸ್ತಾನ ಮತ್ತು ಚೀನಾದ ಜತೆ 1960ರಲ್ಲಿ ಯುದ್ಧ ನಡೆದ ಬಳಿಕ ಈ ಕಾಯ್ದೆಯನ್ನು ರೂಪಿಸಲಾಗಿದೆ. ಬಳಿಕ ಗೃಹ ಸಚಿವಾಲಯದ ಅಧೀನದಲ್ಲಿ 'ಭಾರತದಲ್ಲಿರುವ ಶತ್ರುಗಳ ಆಸ್ತಿಯ ವಾರಸುದಾರ' (ಸಿಇಪಿಐ) ಎಂಬ ವಿಭಾಗವನ್ನು ಸ್ಥಾಪಿಸಲಾಗಿತ್ತು.
ಶತ್ರು ರಾಷ್ಟ್ರಗಳ ಪ್ರಜೆಗಳಿಗೆ ಸೇರಿದ್ದ ಈ ಆಸ್ತಿಗಳನ್ನು 1968ರ ಎನಿಮಿ ಪ್ರಾಪರ್ಟಿ ಆ್ಯಕ್ಟ್ (ಶತ್ರುಗಳ ಆಸ್ತಿ ಕಾಯ್ದೆ) ಪ್ರಕಾರ, ಗೃಹ ಸಚಿವಾಲಯ ಮುಟ್ಟುಗೋಲು ಹಾಕಿಕೊಂಡಿತ್ತು. ಶತ್ರುಗಳ ಆಸ್ತಿಗಳ ಉಸ್ತುವಾರಿ ಹೊಣೆ ಮಾತ್ರ ಸರ್ಕಾರದ್ದು ಎಂಬ 2005ರ ಸುಪ್ರೀಂಕೋರ್ಟ್ ಆದೇಶವನ್ನು ನಿಷ್ಕ್ರಿಯಗೊಳಿಸಲು 2017ರಲ್ಲಿ ಕಾಯ್ದೆಗೆ ತಿದ್ದುಪಡಿ ತರಲಾಗಿತ್ತು. ಇದಕ್ಕೆ 2018ರ ನವೆಂಬರ್ನಲ್ಲಿ ಕೇಂದ್ರ ಸಚಿವಾಲಯ ಅನುಮೋದನೆ ಸಹ ನೀಡಿತ್ತು.
ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ₹ 84,972 ಕೋಟಿ ಸಂಗ್ರಹಿಸಿದ್ದು, ಇದರಲ್ಲಿ ₹ 779 ಕೋಟಿ ಶತ್ರು ರಾಷ್ಟ್ರಗಳ ಷೇರು ಮಾರಾಟದಿಂದ ಬಂದಿದೆ.