ನವದೆಹಲಿ: 'ಎಕನಾಮಿಕ್ ಫ್ರೀಡಮ್ ಆಫ್ ದಿ ವರ್ಲ್ಡ್ ರಿಪೋರ್ಟ್- 2019' ಪ್ರಕಟಿಸಿದ ಜಾಗತಿಕ ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕ ಶ್ರೇಣಿಯಲ್ಲಿ ಭಾರತ 11 ಸ್ಥಾನಗಳ ಏರಿಕೆ ಕಂಡಿದೆ.
ಭಾರತವು ಕಳೆದ ವರ್ಷ 96ನೇ ಸ್ಥಾನದಿಂದ ಪ್ರಸಕ್ತ ವರ್ಷದಲ್ಲಿ 79ನೇ ಸ್ಥಾನಕ್ಕೆ ಜಿಗಿದಿದೆ. ಆರ್ಥಿಕ ಕುಸಿತದಿಂದ ಕಳೆಗುಂದಿದ ಭಾರತಕ್ಕೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಭರವಸೆಯ ವರದಿ ಇದಾಗಿದೆ ಎಂದು ಭಾರತೀಯ ಚಿಂತಕರ ಚಾವಡಿ ಸೆಂಟರ್ ಫಾರ್ ಸಿವಿಲ್ ಸೊಸೈಟಿ ವಿಶ್ಲೇಷಿಸಿದೆ.
ಸಂಪನ್ಮೂಲಗಳ ಆಯ್ಕೆ ಮತ್ತು ಪೂರೈಸುವ ಸ್ವಾತಂತ್ರ್ಯ, ವ್ಯವಹಾರದಲ್ಲಿನ ಸ್ಪರ್ಧೆ, ವ್ಯಾಪಾರಕ್ಕೆ ಮುಕ್ತತೆ ಮತ್ತು ಕಾನೂನುಬದ್ಧವಾಗಿ ರಕ್ಷಿಸಲ್ಪಟ್ಟ ಆಸ್ತಿ ಹಕ್ಕುಗಳು ಆರ್ಥಿಕ ಪ್ರಗತಿಗೆ ಸಂಬಂಧಿಸಿದ ಅಂಶಗಳ ಮೇಲೆ ಸೂಚ್ಯಂಕ ನಿಗದಿ ಪಡಿಸಲಾಗುತ್ತದೆ.
ಆರ್ಥಿಕ ಸ್ವಾತಂತ್ರ್ಯ ಸೂಚ್ಯಂಕದಲ್ಲಿ ಚೀನಾ 113ನೇ ಸ್ಥಾನ ಪಡೆದು ಭಾರತಕ್ಕಿಂತ ಕೆಳ ಶ್ರೇಣಿ ಪಡೆದಿದೆ. ಏಷ್ಯಾ ರಾಷ್ಟ್ರಗಳಲ್ಲಿ ಹಾಂಗ್‌ಕಾಂಗ್ ಮತ್ತು ಸಿಂಗಾಪೂರ ಮೊದಲ ಎರಡು ಸ್ಥಾನದಲ್ಲಿವೆ. ಜಾಗತಿಕವಾಗಿ ನ್ಯೂಜಿಲ್ಯಾಂಡ್, ಸ್ವಿಟ್ಜರ್ಲ್ಯಾಂಡ್, ಅಮೆರಿಕ, ಐರ್ಲ್ಯಾಂಡ್, ಇಂಗ್ಲೆಂಡ್, ಕೆನಡಾ, ಆಸ್ಟ್ರೇಲಿಯಾ ಮತ್ತು ಮಾರಿಷಸ್ ಅಗ್ರ 10 ಸ್ಥಾನದಲ್ಲಿವೆ.
ವೈಯಕ್ತಿಕ ಆಯ್ಕೆಯ ಮಟ್ಟಗಳು, ಮಾರುಕಟ್ಟೆಗಳಿಗೆ ಪ್ರವೇಶಿಸುವ ಸಾಮರ್ಥ್ಯ, ಖಾಸಗಿ ಒಡೆತನದ ಆಸ್ತಿಯ ಸುರಕ್ಷತೆ ಸೇರಿದಂತೆ ಇತರೆ ಆರ್ಥಿಕ ಸ್ವಾತಂತ್ರ್ಯ ಮಾಪನಗಳು ಸಹ ಒಳಗೊಂಡಿವೆ.