ನವದೆಹಲಿ: ಕೇಂದ್ರ ಸರ್ಕಾರ ಈ ಹಿಂದೆ ಜಾರಿಗೊಳಿಸಿದ್ದ ಋುಣಬಾಧ್ಯತೆ ಮತ್ತು ದಿವಾಳಿತನ (2ನೇ ತಿದ್ದುಪಡಿ) ಪ್ರಕ್ರಿಯೆ ನೀತಿ (ಐಬಿಸಿ) 2019, ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ಇಂದು ಮಂಡಿಸಿದರು.
ದೇಶದ ಬ್ಯಾಂಕಿಂಗ್ ವಲಯವನ್ನು ಕಾಡುತ್ತಿರುವ ವಸೂಲಾಗದ ಸಾಲದ ಬಿಕ್ಕಟ್ಟಿನ ಪರಿಹಾರಕ್ಕಾಗಿ ಕೇಂದ್ರ ಸರ್ಕಾರವು 2016ರ ಡಿಸೆಂಬರ್‌ನಲ್ಲಿ ಜಾರಿಗೊಳಿಸಿದ ಆರ್ಥಿಕ ನೀತಿಯೇ ದಿವಾಳಿ ಪ್ರಕ್ರಿಯೆ ಕಾಯ್ದೆ (ಐಬಿಸಿ). ಐಬಿಸಿ ಪ್ರಕಾರ 180 ದಿನಗಳಲ್ಲಿ ದಿವಾಳಿತನ ಪ್ರಕ್ರಿಯೆ ಪೂರ್ಣವಾಗಬೇಕು. ನಂತರ 90 ದಿನ ವಿಸ್ತರಿಸಬಹುದು. ಒಟ್ಟು 270 ದಿನಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿರುತ್ತದೆ.
ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಆದಿರ್ ರಂಜನ್ ಚೌಧರಿ ಅವರು ಮಸೂದೆ ಪರಿಚಯಿಸಿದ್ದನ್ನು ವಿರೋಧಿಸಿದರು. 'ಮಸೂದೆಯನ್ನು ಸದನದಲ್ಲಿ ಪರಿಚಯಿಸುವ ಕನಿಷ್ಠ ಎರಡು ದಿನಗಳ ಮೊದಲು ಸದಸ್ಯರ ಗಮನಕ್ಕೆ ತರಲು ಆಗಿಲ್ಲ. ದಿವಾಳಿತನ ಮತ್ತು ದಿವಾಳಿತನ ಸಂಹಿತೆಯಲ್ಲಿ (ಐಬಿಸಿ) ಸರ್ಕಾರ ಆಗಾಗ್ಗೆ ಬದಲಾವಣೆಗಳನ್ನು ತರುವುದು ಏಕೆ ಎಂದು ಪ್ರಶ್ನಿಸಿದರು'.
ಚೌಧರಿ ಅವರ ಆಕ್ಷೇಪಣೆಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ, 'ಉದ್ಯಮವು ಕೆಲವು ಬದಲಾವಣೆಗಳನ್ನು ಬಯಸಿದ್ದರಿಂದ ಜುಲೈನಲ್ಲಿ ಮಾತ್ರ ಐಬಿಸಿಗೆ ಹಿಂದಿನ ತಿದ್ದುಪಡಿಗಳನ್ನು ತರಲಾಯಿತು. ನಾವು ಆರ್ಥಿಕತೆಯ ಬೆಳವಣಿಗೆಗಳಿಗೆ ಮಾತ್ರ ಪ್ರತಿಕ್ರಿಯಿಸುತ್ತಿದ್ದೇವೆ. ಆದ್ರೆ, ನೀವು ಸರ್ಕಾರವನ್ನು ತಡೆಯುತ್ತಿದ್ದಿರಿ. ದಯವಿಟ್ಟು ಆರ್ಥಿಕತೆಯನ್ನು ಸುಧಾರಿಸಲು ನಮಗೆ ಸಹಾಯ ಮಾಡಿ' ಎಂದು ಮನವಿ ಮಾಡಿದ್ರು.