ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ರೋಗದ ಉಲ್ಬಣ ಹಾಗೂ ಲಾಕ್‌ಡೌನ್ ಜಾರಿಯ ಬಳಿಕ ದೇಶಾದ್ಯಂತ ಉತ್ಪಾದನಾ ಘಟಕಗಳು ಮತ್ತು ತಯಾರಿಕ ಕೇಂದ್ರಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಸಿಎಂಐಇ ಸಂಗ್ರಹಿಸಿದ ದತ್ತಾಂಶದ ಅನ್ವಯ, ಕಳೆದ ತಿಂಗಳಿಂದ ಪರಿಸ್ಥಿತಿ ಕಠೋರವಾಗಿ ಆರಂಭವಾಗಿದೆ. ಮಾರ್ಚ್‌ನಲ್ಲಿ ನಿರುದ್ಯೋಗ ದರ ಶೇ 8.7ರಷ್ಟು ದಾಖಲಾಗಿದೆ. ಇದು 43 ತಿಂಗಳಲ್ಲಿ ಗರಿಷ್ಠ ಹಾಗೂ 2020ರ ಫೆಬ್ರವರಿ ನಿರುದ್ಯೋಗ ದರಕ್ಕಿಂತ 98 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಾಗಿದ್ದು, ಇದು ಅತಿದೊಡ್ಡ ಮಾಸಿಕ ಏರಿಕೆಯಾಗಿದೆ.
ಕೊರೊನಾ ವೈರಸ್ ಹಬ್ಬುವಿಕೆ ಇಡೀ ರಾಷ್ಟ್ರದ ಚಟುವಟಿಕೆಯನ್ನು ಸ್ಥಗಿತಗೊಳಿಸಿದೆ. ಕಾರ್ಮಿಕ ದುಡಿಮೆ ಪ್ರಮಾಣ ಕುಸಿಯುತ್ತಿರುವುದು ನೋಡಿದರೆ ಭಯವಾಗುತ್ತದೆ ಎಂದು ಸಿಎಂಐಇ ವ್ಯವಸ್ಥಾಪಕ ನಿರ್ದೇಶಕ/ ಸಿಇಒ ಮಹೇಶ್ ವ್ಯಾಸ್ ಹೇಳಿದ್ದಾರೆ.
ಈ ಕುಸಿತ ಲಾಕ್‌ಡೌನ್‌ಗೆ ಮುಂಚೆಯೇ ಸಂಭವಿಸಿದೆ. ಲಾಕ್‌ಡೌನ್‌ಗೆ ಕಾಲಿಡುತ್ತಿದ್ದಂತೆ ಅದು ಇನ್ನಷ್ಟು ಕೆಟ್ಟದಾಯಿತು. ಈಗ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣ ಕೆಲ ದಿನಗಳವರೆಗೆ ಕಳವಳಕಾರಿಯಾಗಿ ತೋರಲಿದೆ. ಕೊರೊನಾ ವೈರಸ್ ಹಬ್ಬುವ ಮೊದಲೇ ನಿರುದ್ಯೋಗ ಪ್ರಮಾಣ ಹೆಚ್ಚಳವಾಗಿತ್ತು ಎಂಬುದನ್ನು ಅಂಕಿಅಂಶ ಸಚಿವಾಲಯ ಬಿಡುಗಡೆ ಮಾಡಿದ ದತ್ತಾಂಶಗಳಿಂದ ತಿಳಿಯಬಹುದು. ಭಾರತದ ನಿರುದ್ಯೋಗ ದರವು 2017-18ರಲ್ಲಿ ಶೇ 6.1ಕ್ಕೆ ಏರಿಕೆಯಾಗಿತ್ತು. ಇದು 2019ರ ಜನವರಿಗೂ ಮೊದಲು ಮಾಧ್ಯಮಗಳಲ್ಲಿ ವರದಿಯಾಗಿದೆ. ಕಳೆದ 45 ವರ್ಷಗಳಲ್ಲಿ ಇದು ಅತ್ಯಧಿಕ ನಿರುದ್ಯೋಗವಾಗಿದೆ.
ಉದ್ಯೋಗ ದರ ಮತ್ತು ಕಾರ್ಮಿಕ ಭಾಗವಹಿಸುವಿಕೆಯ ದರ ಹದಗೆಟ್ಟಿದೆ. ಸಿಎಂಐಇ ದತ್ತಾಂಶ ಅನ್ವಯ, ಭಾರತದಲ್ಲಿ ಉದ್ಯೋಗ ದರವು 2020ರ ಮಾರ್ಚ್‌ನಲ್ಲಿ ಸಾರ್ವಕಾಲಿಕ ಕನಿಷ್ಠ ಶೇ 38.2ಕ್ಕೆ ಇಳಿದಿದೆ.
ಕಾರ್ಮಿಕರ ಭಾಗವಹಿಸುವಿಕೆ ಪ್ರಮಾಣ ಅಥವಾ ಒಟ್ಟು ಜನಸಂಖ್ಯೆಯ ಶೇಕಡಾವಾರು ಕೆಲಸಕ್ಕೆ ಲಭ್ಯವಿರುವ ಜನರ ಸಂಖ್ಯೆಯು 2020ರ ಮಾರ್ಚ್‌ನಲ್ಲಿ ಶೇ 41.9ಕ್ಕೆ ಇಳಿದಿದ್ದರೆ, 2019ರ ಫೆಬ್ರವರಿಯಲ್ಲಿ ಶೇ 42.6 ಮತ್ತು ಮಾರ್ಚ್‌ನಲ್ಲಿ ಶೇ 42.7ರಷ್ಟಿತ್ತು.
ಭಾರತದ ಕಾರ್ಮಿಕ ಭಾಗವಹಿಸುವಿಕೆಯ ದರ ಮಾರ್ಚ್‌ನಲ್ಲಿ 9 ಮಿಲಿಯನ್ ಕುಸಿತವಾಗಿದೆ. 2020ರ ಜನವರಿಯಲ್ಲಿ 443 ಮಿಲಿಯನ್‌ನಿಂದ 2020ರ ಮಾರ್ಚ್‌ನಲ್ಲಿ 434 ಮಿಲಿಯನ್‌ಗೆ ತಲುಪಿದೆ. ಏಪ್ರಿಲ್ ಮೊದಲ ವಾರದಲ್ಲಿ ಭಾರತದ ಕಾರ್ಮಿಕ ಭಾಗವಹಿಸುವಿಕೆಯ ಪ್ರಮಾಣ ಶೇ 36ರಷ್ಟಿದ್ದು, ಉದ್ಯೋಗ ದರ ಶೇ 27.7ಕ್ಕೆ ಇಳಿದಿದೆ ಎಂದು ಸಿಎಂಐಇ ತಿಳಿಸಿದೆ.