ಮುಂಬೈ: ಭಾರತೀಯ ಇಕ್ವಿಟಿ ಮಾರುಕಟ್ಟೆಯಲ್ಲಿ ಕೊರೊನಾ ವೈರಸ್ ಕರಿಛಾಯೆ ಮುಂದುವರೆದಿದೆ. ಸೋವಾರದ ವಹಿವಾಟಿನಂದು ಸೆನ್ಸೆಕ್ಸ್ ಇಳಿಕೆ ದಾಖಲಿಸಿದೆ. ಸತತ ಇಳಿಕೆಯಲ್ಲಿದ್ದ ಸೆನ್ಸೆಕ್ಸ್ ಮತ್ತು ನಿಫ್ಟಿ ಕಳೆದ ವಾರದಿಂದ ಒಂದಿಷ್ಟು ಲಾಭ ಮಾಡಿಕೊಂಡಿದ್ದವು. ಆದರೆ, ವಾರದ ಆರಂಭಿಕ ವಹಿವಾಟಿನಂದು ಶೇ. 4.61ರಷ್ಟು ಇಳಿಕೆ ಕಂಡಿದೆ.
ಬ್ಯಾಂಕ್ ಮತ್ತು ಹಣಕಾಸು ಸೇವಾ ವಲಯದ ಷೇರುಗಳ ಮೌಲ್ಯವು ಗಳಿಕೆಯಾಗಿದ್ದರೆ ಬಜಾಜ್ ಫೈನಾನ್ಸ್, ಕೊಟಕ್ ಮಹೀಂದ್ರಾ ಬ್ಯಾಂಕ್, ಎಚ್‌ಡಿಎಫ್‌ಸಿ ಟ್ವಿನ್ಸ್ ಮತ್ತು ಐಸಿಐಸಿಐ ಬ್ಯಾಂಕ್ ಗರಿಷ್ಠ ನಷ್ಟದಲ್ಲಿ ಮುಂಚೂಣಿಯಲ್ಲಿದ್ದವು. ಮುಂಬೈ ಸೂಚ್ಯಂಕ ಸೆನ್ಸೆಕ್ಸ್ 1,375.27 ಅಂಶಗಳು ಅಥವಾ ಶೇ. 4.61ರಷ್ಟು ಕುಸಿದು 28,440.32 ಅಂಕಗಳ ಮಟ್ಟದಲ್ಲೂ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 50 ಸೂಚ್ಯಂಕವು 379.15 ಅಂಕಗಳು ಅಥವಾ ಶೇ. 4.38ರಷ್ಟು ಇಳಿಕೆಯಾಗಿ 8,281.10 ಅಂಕಗಳಲ್ಲಿ ಕೊನೆಗೊಂಡಿತು.
ಫಾರ್ಮಾ ಮತ್ತು ಎಫ್‌ಎಂಸಿಜಿ ಷೇರುಗಳು ಹಸಿರು ಬಣ್ಣದಲ್ಲಿ ಮುಂದುವರಿದಿದ್ದರೇ ಸಿಪ್ಲಾ, ನೆಸ್ಲೆ ಇಂಡಿಯಾ, ಡಾ. ರೆಡ್ಡೀಸ್ ಲ್ಯಾಬೊರೇಟರೀಸ್ ಮತ್ತು ಹಿಂದೂಸ್ತಾನ್ ಯೂನಿಲಿವರ್ ಇಂದಿನ ವ್ಯಾಪಾರದಲ್ಲಿ ಹೆಚ್ಚಿನ ಲಾಭ ಗಳಿಸಿದವು. ಫ್ಯೂಚರ್ ಕಚ್ಚಾ ತೈಲ ದರವು ಪ್ರತಿ ಬ್ಯಾರೆಲ್ ಮೇಲೆ ಶೇ 4.12ರಷ್ಟು ಇಳಿಕೆಯಾಗಿ ₹1,629 ತಲುಪಿತು. ಪ್ರತಿ 10 ಗ್ರಾಂ. ಚಿನ್ನದ ದರದ ಮೇಲೆ ಶೇ 0.81ರಷ್ಟು ಇಳಿಕೆಯಾಗಿ ₹45,217ಕ್ಕೆ ತಲುಪಿತು.