ಬೀಜಿಂಗ್: ತನ್ನ ಪ್ರತಿಸ್ಪರ್ಧಿ ತೈವಾನ್‌ಗೆ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಿದ್ದಕ್ಕಾಗಿ ಬೋಯಿಂಗ್‌ನ ರಕ್ಷಣಾ ಘಟಕ ಮತ್ತು ಲಾಕ್‌ಹೀಡ್ ಮಾರ್ಟಿನ್ ಸೇರಿದಂತೆ ಅಮೆರಿಕದ ಮಿಲಿಟರಿ ಗುತ್ತಿಗೆದಾರರ ಮೇಲೆ ನಿರ್ಬಂಧ ಹೇರಲಾಗಿದೆ ಎಂದು ಚೀನಾ ಸರ್ಕಾರ ತಿಳಿಸಿದೆ.
ರೇಥಿಯಾನ್ ಟೆಕ್ನಾಲಜೀಸ್ ಕಾರ್ಪೊರೇಷನ್ ಮತ್ತು ಮಾರಾಟ ಸಂಬಂಧಿತ ಅಮೆರಿಕನ್ ವ್ಯಕ್ತಿಗಳಿಗೂ ಸಹ ಇದು ಪರಿಣಾಮ ಬೀರುತ್ತವೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಝವೋ ಲಿಜಿಯಾನ್ ಹೇಳಿದ್ದಾರೆ. ಆದರೆ, ಯಾವ ವಿಧದ ದಂಡ ವಿಧಿಸಬಹುದು ಅಥವಾ ಯಾವಾಗ ಎಂಬುದರ ಬಗ್ಗೆ ಅವರು ಯಾವುದೇ ವಿವರಗಳನ್ನು ನೀಡಿಲ್ಲ.
ಆಡಳಿತರೂಢ ಕಮ್ಯುನಿಸ್ಟ್ ಪಕ್ಷ, 1949ರಲ್ಲಿನ ಅಂತರ್ಯುದ್ಧದ ವೇಳೆ ಮುಖ್ಯ ಭೂಭಾಗದೊಂದಿಗೆ ವಿಭಜನೆಯಾದ ತೈವಾನ್ ಅನ್ನು ತನ್ನ ಪ್ರದೇಶದ ಭಾಗ ಎಂದು ಹೇಳಿಕೊಂಡಿದೆ. ಜೊತೆಗೆ ಅದರ ಮೇಲೆ ಆಕ್ರಮಣ ಮಾಡುವ ಬೆದರಿಕೆ ಹಾಕಿದೆ. ವಾಷಿಂಗ್ಟನ್ 1980ರ ದಶಕದಲ್ಲಿ ತೈವಾನ್‌ಗೆ ಶಸ್ತ್ರಾಸ್ತ್ರಗಳ ಮಾರಾಟ ತಗ್ಗಿಸಲು ಹಾಗೂ ಕೊನೆಗೊಳಿಸುವ ಭರವಸೆ ನೀಡಿತ್ತು. ಆದರೆ, ಬೀಜಿಂಗ್‌ನೊಂದಿಗಿನ ತನ್ನ ವಿವಾದವನ್ನು ಶಾಂತಿಯುತವಾಗಿ ಬಗೆಹರಿಸಬೇಕು ಎಂದು ಆಗ್ರಹಿಸುತ್ತಿದೆ.
ರಾಷ್ಟ್ರೀಯ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶವಾಗಿ ತೈವಾನ್‌ಗೆ ಶಸ್ತ್ರಾಸ್ತ್ರ ಮಾರಾಟದಲ್ಲಿ ಭಾಗಿಯಾಗಿರುವ ಅಮೆರಿಕನ್ ಕಂಪನಿಗಳ ಮೇಲೆ ನಿರ್ಬಂಧ ಹೇರಲು ಚೀನಾ ನಿರ್ಧರಿಸಿದೆ ಎಂದು ಝಾವೋ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಚೈನೀಸ್-ಅಮೆರಿಕ ಭದ್ರತೆ, ತಂತ್ರಜ್ಞಾನ, ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಕುರಿತಾದ ವಿವಾದಗಳ ಮಧ್ಯೆ ದಶಕಗಳಲ್ಲಿನ ಉಭಯ ರಾಷ್ಟ್ರಗಳ ಸಂಬಂಧ ಅತ್ಯಂತ ಕೆಳಮಟ್ಟಕ್ಕೆ ಇಳಿದಿದೆ.