ನವದೆಹಲಿ: ಸಿಜಿಎಸ್ಟಿ ಸಂಗ್ರಹವು 2019-20ರ ಎಪ್ರಿಲ್-ನವೆಂಬರ್ ಅವಧಿಯಲ್ಲಿ 40 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.
2019-20ರ ಆರ್ಥಿಕ ವರ್ಷದ ಎಪ್ರಿಲ್-ನವೆಂಬರ್ ಅವಧಿಯಲ್ಲಿ ನೈಜ ಸಿಜಿಎಸ್ಟಿ ಸಂಗ್ರಹವು ₹ 3,28,365 ಕೋಟಿಯಷ್ಟಿದೆ. ಈ ಅವಧಿಯಲ್ಲಿ ಬಜೆಟ್ ಅಂದಾಜಿನಲ್ಲಿ ₹ 5,26,000 ಕೋಟಿಯಷ್ಟು ಸಂಗ್ರಹ ಆಗಬೇಕಿತ್ತು ಎಂದು ಹಣಕಾಸು ಖಾತೆಯ ರಾಜ್ಯ ಸಚಿವ ಅನುರಾಗ್ ಠಾಕೂರ್ ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
2018-19ರಲ್ಲಿ ಸಿಜಿಎಸ್ಟಿ ಸಂಗ್ರಹವು ಎಪ್ರಿಲ್-ನವೆಂಬರ್ ತಿಂಗಳ ನಡುವೆ ₹ 6,03,900 ಲಕ್ಷ ಕೋಟಿ ಆಗಲಿದೆ ಎಂಬ ಅಂದಾಜು ಇರಿಸಿಕೊಳ್ಳಲಾಗಿತ್ತು. ಆದರೆ, ಅಂತಿಮವಾಗಿ ₹4,57,534 ಕೋಟಿಯಷ್ಟು ಮಾತ್ರ ಸಂಗ್ರಹವಾಗಿತ್ತು. ಆದರೆ, ಈ ವರ್ಷ ಇನ್ನಷ್ಟೂ ಇಳಿಕೆಯಾಗಿದೆ ಎಂದು ಹೇಳಿದರು.
ಜಿಎಸ್ಟಿ ತೆರಿಗೆ ವಂಚನೆಯನ್ನು ತಡೆಗಟ್ಟಲು ಮಾನಿಟರಿಂಗ್ ಪರಿಕರಗಳನ್ನು ಸಾಕಷ್ಟು ಬಲಪಡಿಸಲಾಗಿದೆ. ಸಿಸ್ಟಮ್ ಆಧಾರಿತ ವಿಶ್ಲೇಷಣಾತ್ಮಕ ಪರಿಕರಗಳು ಹಾಗೂ ರಚನಾತ್ಮಕ ಸಿಸ್ಟಮ್ ಬುದ್ಧಿಮತ್ತೆಗೆ ಹೆಚ್ಚಿನ ಒತ್ತು ನೀಡಲಾಗಿದೆ. ಇದಕ್ಕಾಗಿ ಸಿಬಿಐಸಿಯಲ್ಲಿ ಡೈರೆಕ್ಟೊರೇಟ್ ಜನರಲ್ ಆಫ್ ಅನಾಲಿಟಿಕ್ಸ್ ಆ್ಯಂಡ್ ರಿಸ್ಕ್ ಮ್ಯಾನೇಜ್ಮೆಂಟ್ (ಡಿಜಿಎಆರ್ಎಂ) ಅನ್ನು ಸ್ಥಾಪಿಸಲಾಗಿದೆ. ಸಾಗಣೆಯಲ್ಲಿನ ಸರಕುಗಳ ಸಮರ್ಪಕ ಪರಿಶೀಲನೆಗೆ ಇ-ವೇ ಬಿಲ್ ಸ್ಕ್ವಾಡ್‌ಗಳನ್ನು ಅಳವಡಿಸಿಕೊಳ್ಳಲಾಗಿದೆ ಎಂದು ಠಾಕೂರ್ ಹೇಳಿದ್ರು.