ನವದೆಹಲಿ: ಜಿಎಸ್ಟಿ ಆದಾಯದ ಕೊರತೆ ನೀಗಿಸಲು 20 ರಾಜ್ಯಗಳಿಗೆ ಮುಕ್ತ ಮಾರುಕಟ್ಟೆ ಮೂಲಕ 68,825 ಕೋಟಿ ರೂ. ಸಾಲ ಎತ್ತಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ಜಿಎಸ್ಟಿ ಕೊರತೆ ನೀಗಿಸಲು ಭವಿಷ್ಯದ ಜಿಎಸ್ಟಿ ಸಂಗ್ರಹಣೆಗೆ ಪ್ರತಿಯಾಗಿ ರಾಜ್ಯಗಳು ಸಾಲ ಪಡೆಯುವ ಕೇಂದ್ರದ ಪ್ರಸ್ತಾವನೆಯ ಬಗ್ಗೆ ಜಿಎಸ್ಟಿ ಕೌನ್ಸಿಲ್ ಸಭೆ ಒಂದು ಒಮ್ಮತ ತಲುಪಲು ವಿಫಲವಾದ ಒಂದು ದಿನದ ಬಳಿಕ ಈ ನಿರ್ಧಾರಕ್ಕೆ ಬಂದಿದೆ.
ಪ್ರಸಕ್ತ ಹಣಕಾಸು ವರ್ಷದಲ್ಲಿ ಒಟ್ಟು ಪರಿಹಾರದ ಕೊರತೆಯಾದ 2.35 ಲಕ್ಷ ಕೋಟಿ ರೂ.ಗೆ ಕೇಂದ್ರವು ಆಗಸ್ಟ್‌ನಲ್ಲಿ ರಾಜ್ಯಗಳಿಗೆ ಎರಡು ಆಯ್ಕೆಗಳನ್ನು ನೀಡಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಜತೆ ಸಮಾಲೋಚನೆ ನಡೆಸಿ ವಿಶೇಷ ವಿಂಡೋ ಮೂಲಕ 97,000 ಕೋಟಿ ರೂ. ಸಮಂಜಸ ಬಡ್ಡಿದರದಲ್ಲಿ ಸಾಲ ಮತ್ತು ರಾಜ್ಯಗಳು ಒಟ್ಟು 2.35 ಲಕ್ಷ ಕೋಟಿ ರೂ.ಗಳನ್ನು ಮಾರುಕಟ್ಟೆಯಿಂದ ಸಾಲವಾಗಿ ಪಡೆಯಬಹುದು. ಈ ಸಾಲದ ಅಸಲು ಕೇಂದ್ರ ತೀರಿಸುತ್ತದೆ.
ಮುಕ್ತ ಮಾರುಕಟ್ಟೆ ಸಾಲ ಪಡೆದು 68,825 ಕೋಟಿ ರೂ. ಹೆಚ್ಚುವರಿ ಹಣ ಸಂಗ್ರಹಿಸಲು ಹಣಕಾಸು ಇಲಾಖೆ 20 ರಾಜ್ಯಗಳಿಗೆ ಅನುಮತಿ ನೀಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಜಿಎಸ್ಟಿ ಅನುಷ್ಠಾನದಿಂದ ಉಂಟಾಗುವ ಕೊರತೆ ನೀಗಿಸಲು ಹಣಕಾಸು ಸಚಿವಾಲಯವು ಸೂಚಿಸಿರುವ ಎರಡು ಆಯ್ಕೆಗಳಲ್ಲಿ ಆಯ್ಕೆ-1ಕ್ಕೆ ಮೊರೆ ಹೋದ ರಾಜ್ಯಗಳಿಗೆ ಒಟ್ಟು ರಾಜ್ಯ ದೇಶೀಯ ಉತ್ಪನ್ನದ ಶೇ 0.50ರಷ್ಟು ದರದಲ್ಲಿ ಹೆಚ್ಚುವರಿ ಸಾಲ ಅನುಮತಿ ನೀಡಲಾಗಿದೆ ಎಂದು ಹೇಳಿದೆ.
ಆಯ್ಕೆ -1 ಆಯ್ದುಕೊಂಡ ಇಪ್ಪತ್ತು ರಾಜ್ಯಗಳಲ್ಲಿ ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ಅಸ್ಸೊಂ, ಬಿಹಾರ, ಗೋವಾ, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್ ಒಡಿಶಾ, ಸಿಕ್ಕಿಂ, ತ್ರಿಪುರ, ಉತ್ತರ ಪ್ರದೇಶ ಮತ್ತು ಉತ್ತರಾಖಂಡ ಸೇರಿವೆ.