ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ಗೆ (ಪಿಎನ್‌ಬಿ) 31 ಕೋಟಿ ರೂ. ವಂಚಿಸಿದ್ದ ಪ್ರಕರಣ ಸಂಬಂಧ ಸಿಬಿಐ ಗುರುವಾರ ಒಡಿಶಾ, ಆಂಧ್ರಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಜಮ್ಮು ಮತ್ತು ಕಾಶ್ಮೀರದ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಅಂದಿನ ಪಿಎನ್‌ಬಿಯ ಅಧಿಕಾರಿಗಳ ನಿವಾಸ ಹಾಗೂ ವಿಶಾಖಪಟ್ಟಣಂ, ಕೋಲ್ಕತ್ತಾ, ಜಮ್ಮು, ಭುವನೇಶ್ವರ ಮತ್ತು ಕಟಕ್‌ನ ಖಾಸಗಿ ವ್ಯಕ್ತಿಗಳಿಗೆ ಸೇರಿದ ವಸತಿ ಮತ್ತು ಕಚೇರಿಗಳಲ್ಲಿ ಏಜೆನ್ಸಿ ಅಧಿಕಾರಿಗಳು ಶೋಧ ನಡೆಸಿದ್ದಾರೆ ಎಂದು ಸಿಬಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶೋಧದ ವೇಳೆ ದೋಷಾರೋಪಣೆಗೆ ಸಂಬಂಧಿಸಿದ ದಾಖಲೆಗಳು ಮತ್ತು ಲಾಕರ್ ಕೀಗಳು ಪತ್ತೆಯಾಗಿವೆ ಎಂದು ಹೇಳಿದ್ದಾರೆ.
ಅಂದಿನ ಮುಖ್ಯ ವ್ಯವಸ್ಥಾಪಕರಾಗಿದ್ದ ನಾಗಮಣಿ ಸತ್ಯನಾರಾಯಣ ಪ್ರಸಾದ್ ಅವರ ಸಂಸ್ಥೆಯಲ್ಲಿ ಶೋಧ ಕಾರ್ಯ ನಡೆದಿದೆ. ಆಗಿನ ಸಹಾಯಕ ಜನರಲ್ ಮ್ಯಾನೇಜರ್ ಎಸ್. ಸಿ. ಶರ್ಮಾ, ಅಂದಿನ ಮುಖ್ಯ ವ್ಯವಸ್ಥಾಪಕ ಮನೋರಂಜನ್ ಡ್ಯಾಶ್, ಭುವನೇಶ್ವರ ಪಿಎನ್‌ಬಿ ಸ್ಟೇಷನ್ ವೃತ್ತ ಶಾಖೆಯ ಅಂದಿನ ಹಿರಿಯ ವ್ಯವಸ್ಥಾಪಕ ಪ್ರಿಯೋಟೋಶ್ ದಾಸ್ ಅವರ ನಿವಾಸದ ಮೇಲೆ ದಾಳಿ ಮಾಡಲಾಗಿದೆ ಎಂದು ಸಿಬಿಐ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಭುವನೇಶ್ವರದಲ್ಲಿನ ಗ್ಲೋಬಲ್ ಟ್ರೇಡಿಂಗ್ ಸೊಲ್ಯೂಷನ್ಸ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಬಿನಾಶ್ ಮೊಹಂತಿ, ಮಾಜಿ ನಿರ್ದೇಶಕರಾದ ಕೌಶಿಕ್ ಮೊಹಂತಿ ಮತ್ತು ಅನ್ಶುಮಾನ್ ಸಮಂತರಾಯ್ ಮತ್ತು ಕಂಪನಿಯ ನಿರ್ದೇಶಕ ಬಿಧುಭೂಸಣ್ ನಾಯಕ್ ಸೇರಿದಂತೆ ಇತರರ ನಿವಾಸ ಮತ್ತು ಕಚೇರಿಗಳಲ್ಲಿ ಶೋಧ ಕಾರ್ಯ ಮುಂದುವರೆದಿದೆ.