ನವದೆಹಲಿ: ಇದೇ 31ರಿಂದ ಬಜೆಟ್ ಸಂಸತ್ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 1 ರಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್ ಮಂಡಿಸಲಿದ್ದಾರೆ. ಲೋಕಸಭೆ ಹಾಗೂ ರಾಜ್ಯಸಭೆ ಅಧಿವೇಶನದ ಎರಡೂ ಕಲಾಪಗಳಲ್ಲಿ ಮೊದಲೆರಡು ದಿನ ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರ ಅವಧಿ ಇರುವುದಿಲ್ಲ ಎಂದು ಸಂಸತ್ ಬುಲೆಟಿನ್‌ನಲ್ಲಿ ಸ್ಪಷ್ಟಪಡಿಸಲಾಗಿದೆ.
ಜನವರಿ 31 ರಂದು ಸೆಂಟ್ರಲ್ ಹಾಲ್‌ನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರ ಭಾಷಣದೊಂದಿಗೆ ಕಲಾಪ ಆರಂಭವಾಗಲಿದೆ. ಫೆ.1 ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಬಜೆಟ್ ಮಂಡಿಸಲಿದ್ದಾರೆ. ಹೀಗಾಗಿ 17ನೇ ಲೋಕಸಭೆಯ 8ನೇ ಅಧಿವೇಶನದ ಮೊದಲ ಎರಡು ದಿನ ಎರಡೂ ಕಲಾಪಗಳಲ್ಲಿ ಶೂನ್ಯ ವೇಳೆ ಹಾಗೂ ಪ್ರಶ್ನೋತ್ತರ ಇರುವುದಿಲ್ಲ.
ಒಂದು ವೇಳೆ ಸದಸ್ಯರಿಂದ ಸಾರ್ವಜನಿಕ ತುರ್ತು ಪ್ರಶ್ನೆಗಳು ಇದ್ದಲ್ಲಿ ಅವುಗಳನ್ನು ಫೆ.2 ರಂದು ನಡೆಯಲಿರುವ ಕಲಾಪಕ್ಕೆ ಪರಿಗಣಿಸಲಾಗುತ್ತದೆ. ಈ ಸಂಬಂಧ ಫೆ.1 ರಂದು ಬೆಳಗ್ಗೆ 10ರಿಂದ ಸಂಜೆ 6 ಗಂಟೆಯೊಳಗೆ ಆನ್‌ಲೈನ್ ಇ - ಪೋರ್ಟಲ್ ಅಥವಾ ನೇರವಾಗಿ ಸಂಸತ್ ನೋಟಿಸ್ ಕಚೇರಿಗೆ ತಿಳಿಸಬೇಕೆಂದು ಸೂಚಿಸಲಾಗಿದೆ.
ಸಂಸತ್ ನಿಯಮದ ಪ್ರಕಾರ ಲೋಕಸಭೆ ಅಧಿವೇಶನದ ನಿತ್ಯ 60 ನಿಮಿಷ ಪ್ರಶ್ನಾವಳಿ ಹಾಗೂ ಶೂನ್ಯದ ಅವಧಿ ಇರುತ್ತದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನದೊಳಗೆ ಪ್ರಶ್ನೋತ್ತರ ಮತ್ತು ಶೂನ್ಯದ ಸಮಯ ಇರುತ್ತದೆ.
ರಾಜ್ಯಸಭೆಯಲ್ಲಿ ಬೆಳಗ್ಗೆ 11 ಗಂಟೆಯಿಂದ ಶೂನ್ಯ ವೇಳೆ ಆರಂಭವಾದರೆ ಮಧ್ಯಾಹ್ನದ ಸಮಯದಲ್ಲಿ ಪ್ರಶ್ನೋತ್ತರ ಸಮಯ ಇರುತ್ತದೆ. ಫೆ.1 ರಂದು ಬೆಳಗ್ಗೆ 11 ಗಂಟೆಗೆ ಆರ್ಥಿಕ ವರ್ಷದ ಬಜೆಟ್ ಅನ್ನು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ಸಚಿವೆ ಸೀತಾರಾಮನ್ ಮಂಡಿಸಲಿದ್ದಾರೆ.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ