ನವದೆಹಲಿ: ಕೆಲವು ರಾಜ್ಯಗಳ ಅನುಷ್ಠಾನದಲ್ಲಿರುವ ಅಡೆತಡೆಗಳಿಂದಾಗಿ ಮುಂಬರುವ ಬಜೆಟ್‌ನಲ್ಲಿ ಪಿಎಂ-ಕಿಸಾನ್ ಯೋಜನೆಯ ಹಂಚಿಕೆಯ ಶೇ 20ರಷ್ಟು ಅನುದಾನ ಕಡಿಮೆ ಮಾಡಿ 75 ಸಾವಿರ ಕೋಟಿ ರೂ.ಯನ್ನು 60,000 ಕೋಟಿ ರೂ.ಗೆ ಇಳಿಸಬಹುದು ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಸರ್ಕಾರವು ಪಿಎಂ-ಕಿಸಾನ್ ಯೋಜನೆಯನ್ನು ಜಾರಿಗೆ ತಂದು 2019-20ನೇ ಸಾಲಿನ ಬಜೆಟ್ ಅಂದಾಜಿನಲ್ಲಿ (ಬಿಇ) 75,000 ಕೋಟಿ ರೂ. ಮೀಸಲಿಟ್ಟು, ರೈತರಿಗೆ ವರ್ಷಕ್ಕೆ 6,000 ರೂ. ಮೂರು ಕಂತುಗಳಲ್ಲಿ ನೀಡಿತ್ತು.
ಪಶ್ಚಿಮ ಬಂಗಾಳ ಸೇರಿದಂತೆ ಕೆಲವು ರಾಜ್ಯಗಳು ಈ ಯೋಜನೆಯನ್ನು ಇನ್ನೂ ಅನುಷ್ಠಾನಕ್ಕೆ ತಂದಿಲ್ಲ. ಅನೇಕರ ರೈತರಿಗೆ ಈ ಬಗ್ಗೆಯ ಮಾಹಿತಿಯ ಕೊರತೆಯಿಂದಾಗಿ ಪ್ರಸಕ್ತ ಹಣಕಾಸು ವರ್ಷದ ಪರಿಷ್ಕೃತ ಅಂದಾಜಿನ (ಆರ್‌ಇ) ಹಂಚಿಕೆಯಲ್ಲಿ 61,000 ಕೋಟಿ ರೂ.ಗೆ ಇಳಿದಿದೆ ಎಂದು ಮೂಲಗಳು ತಿಳಿಸಿವೆ.
ಅನುದಾನ ಕ್ಷೀಣಿಸಿದ್ದರ ಜೊತೆಗೆ ಫಲಾನುಭವಿ ರೈತರ ಸಂಖ್ಯೆಯನ್ನು ಕೂಡ ಹಿಂದಿನ 14.5 ಕೋಟಿಗಳಿಂದ 14 ಕೋಟಿಗೆ ಇಳಿಸಲಾಗಿದೆ.
2020-21ರ ಹಣಕಾಸು ವರ್ಷದಲ್ಲಿ ಸರ್ಕಾರವು ಸುಮಾರು 61,000 ಕೋಟಿ ರೂ. ಮೀಸಲಿಡುವ ನಿರೀಕ್ಷೆಯಿದೆ. ಇದು 2019-20ರ ಆರ್ಥಿಕ ವರ್ಷದ ಪರಿಷ್ಕೃತ ಅಂದಾಜಿನ ಪ್ರಕಾರ ಒದಗಿಸಲ್ಪಟ್ಟಿದೆ ಎಂದು ಮೂಲವೊಂದು ಹೇಳಿದೆ.
ಕೇಂದ್ರ ಸರ್ಕಾರವು ಈವರೆಗೆ ಪಿಎಂ-ಕಿಸಾನ್ ಯೋಜನೆಯಡಿ 8.35 ಕೋಟಿ ರೈತರಿಗೆ ಹಣವನ್ನು ವಿತರಿಸಿದ್ದರಿಂದ ಪರಿಷ್ಕೃತ ಬಜೆಟ್ ಅಂದಾಜಿನ ಹಂಚಿಕೆಯನ್ನು ಕಡಿಮೆ ಮಾಡಲಾಗಿದೆ ಎಂದಿದೆ.
2019ರ ಫೆಬ್ರವರಿಯಲ್ಲಿ ಮಂಡಿಸಲಾದ ಮಧ್ಯಂತರ ಬಜೆಟ್‌ನಲ್ಲಿ ಸರ್ಕಾರವು ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಜಾರಿಗೆ ತಂದಿತ್ತು. ಈ ಹಣಕಾಸು ವರ್ಷದಲ್ಲಿ 13.5 ಲಕ್ಷ ಕೋಟಿ ರೂ.ಗಳಿಂದ ಕೃಷಿ ಸಾಲದ ಗುರಿಯನ್ನು ಶೇ 10ರಷ್ಟು ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ. (ಪಿಟಿಐ ವರದಿ)