ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಎರಡನೇ ಬಜೆಟ್ ಮಂಡನೆಗೆ ಸೂಟ್ ಕೇಸ್ ಬಿಟ್ಟು ಮತ್ತೆ ಬಟ್ಟೆ ಬ್ಯಾಗ್ ಹಿಡಿದಿದ್ದಾರೆ.
ಈ ಬಾರಿಯೂ ರೇಷ್ಮೆ ಬಟ್ಟೆಯಲ್ಲಿ ಮಾಡಿದ ಬ್ಯಾಗ್ ತಂದಿರುವ ಸೀತಾರಾಮನ್, ಅದರ ಮೇಲೆ ಹಣಕಾಸು ಇಲಾಖೆಯ ಲಾಂಛನ ಹಾಕಿಸಿದ್ದಾರೆ. ಕೆಂಪು ಬಣ್ಣದ ರೇಷ್ಮೆ ಬಟ್ಟೆಯಲ್ಲಿ ಪುರಾತನ ಭಾರತೀಯ ಸಂಪ್ರದಾಯದ ಬಹಿ ಖಾತಾದಲ್ಲಿ ಬಜೆಟ್ ಪ್ರತಿ ತಂದಿದ್ದಾರೆ.
ಬೆಳಗ್ಗೆ ಸಂಸತ್‌ಗೆ ಹೊರಡುವ ಮುಂಚೆ ವಿತ್ತ ಸಚಿವಾಲಯದಲ್ಲಿ ಸಭೆ ನಡೆಸಿದ ನಿರ್ಮಲಾ ಸೀತಾರಾಮನ್, ಹಣಕಾಸು ಖಾತೆ ರಾಜ್ಯ ಸಚಿವ ಠಾಕೂರ್ ಹಾಗೂ ಹಿರಿಯ ಅಧಿಕಾರಿಗಳು ಭಾಗವಹಿಸಿದರು.
ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿಗೆ ಹೋಗುವ ಮುನ್ನ ರಾಷ್ಟ್ರಪತಿ ಭವನಕ್ಕೆ ತೆರಳಿ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಅವರಿಂದ ಬಜೆಟ್ ಪ್ರತಿಗೆ ಒಪ್ಪಿಗೆ ಪಡೆದುಕೊಂಡರು.
ಈ ಹಿಂದೆ ಪಿ. ಚಿದಂಬರಂ ಅವರು, ಸರಳ ಕಂದು ಮತ್ತು ಕೆಂಪು ಕಂದು ಬಣ್ಣದ ಬ್ರೀಫ್ ಕೇಸ್ ಬಳಸಿದ್ದರು. ಅರುಣ್ ಜೇಟ್ಲಿ ಅವರು 2014ರ ತಮ್ಮ ಪ್ರಥಮ ಬಜೆಟ್ ಮಂಡನೆಗೆ ಕಂದು ಬಣ್ಣದ ಮತ್ತು 2017ರಲ್ಲಿ ಗಾಢ ಕಂದು ಬಣ್ಣದ ಬ್ರೀಫ್ ಕೇಸ್ ಬಳಸಿದ್ದರು. 2019 ಲೇಖಾನುದಾನ ಮಂಡಿಸಿದ್ದ ಹಂಗಾಮಿ ವಿತ್ತ ಸಚಿವ ಪಿಯೂಷ್ ಗೋಯಲ್ ಕಪ್ಪು ಬಣ್ಣದ ಬಜೆಟ್ ಪೆಟ್ಟಿಗೆ ತೆಗೆದುಕೊಂಡು ಹೋಗಿದ್ದರು.