ನವದೆಹಲಿ: ಕೇಂದ್ರ ಸರ್ಕಾರ ಕೃಷಿ ಸಂಬಂಧಿತ ವಿವಾದಾತ್ಮಕ ಮಸೂದೆಗಳಾದ ರೈತರ ಉತ್ಪಾದನೆ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಮಸೂದೆ, ರೈತರ (ಸಬಲೀಕರಣ ಮತ್ತು ಸಂರಕ್ಷಣೆ) ಬೆಲೆ ಭರವಸೆ ಹಾಗೂ ಕೃಷಿ ಸೇವೆಗಳ ಮಸೂದೆ ಒಪ್ಪಂದ ಮತ್ತು ಅಗತ್ಯ ಸರಕುಗಳ ಕಾಯ್ದೆಗೆ ತಿದ್ದುಪಡಿ ತಂದು ಉಭಯ ಸದನಗಳಲ್ಲಿ ಅಂಗೀಕರಿಸಿದೆ. ಈ ಬಗ್ಗೆ ರೈತರು ಮತ್ತು ವಿರೋಧ ಪಕ್ಷಗಳು ತೀವ್ರವಾಗಿ ವಿರೋಧಿಸುತ್ತಿವೆ.
ಈ ಮಸೂದೆಗಳಿಂದ ರೈತರ ಕೃಷಿ ಸರಕುಗಳಿಗೆ ಮುಕ್ತ ಅಂತರ್ ರಾಜ್ಯ ವ್ಯಾಪಾರವನ್ನು ಉತ್ತೇಜಿಸುತ್ತದೆ ಮತ್ತು ರೈತರು ತಮ್ಮ ಉತ್ಪನ್ನಗಳಿಗೆ ಉತ್ತಮ ಬೆಲೆ ಪಡೆಯಲು ನೆರವಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಇನ್ನೊಂದೆಡೆ ಹೊಸ ಕಾಯ್ದೆಗಳು ದೊಡ್ಡ ಕಂಪನಿ ಹಾಗೂ ಸಂಸ್ಥೆಗಳಿಗೆ ಮಾತ್ರ ವರವಾಗುತ್ತದೆ. ಬಹುಪಾಲು ಸಣ್ಣ ಮತ್ತು ಹಿಡುವಳಿ ರೈತರಿಗೆ ಸಾಕಷ್ಟು ತೊಂದರೆಕೊಡಲಿದೆ ಎಂಬುದು ವಿಮರ್ಶಕರ ಆರೋಪವಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ 'ಈಟಿವಿ ಭಾರತ'ಗೆ ಇಂದಿರಾ ಗಾಂಧಿ ಇನ್ಸ್ಟಿಟ್ಯೂಟ್ ಆಫ್ ಡೆವಲಪ್ಮೆಂಟ್ ರಿಸರ್ಚ್ (ಐಜಿಐಡಿಆರ್) ನಿರ್ದೇಶಕ ಮತ್ತು ಉಪಕುಲಪತಿ ಪ್ರೊ. ಮಹೇಂದ್ರ ದೇವ್ ಅವರು ಮಾತನಾಡಿದ್ದಾರೆ. ಇದಕ್ಕೂ ಮೊದಲು ದೇವ್ ಅವರು ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಅಧ್ಯಕ್ಷರಾಗಿದ್ದು, ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು.
ಗುತ್ತಿಗೆ ಕೃಷಿಯು (ಕಾನೂನು) ದೊಡ್ಡ ಕಂಪನಿಗಳಿಗೆ ನೆರವಾಗುತ್ತದೆ. ಹೆಚ್ಚಿನ ಚೌಕಾಶಿ ಶಕ್ತಿ ಹೊಂದಿರುವುದರಿಂದ ಈ ಒಪ್ಪಂದವು ಅವರ ಪರವಾಗಿರುತ್ತದೆ. ಕೃಷಿಕ ಉತ್ಪಾದಕ ಸಂಸ್ಥೆಗಳು (ಎಫ್‌ಪಿಒ) ದೊಡ್ಡ ಕಂಪನಿಗಳೊಂದಿಗೆ ಒಟ್ಟುಗೂಡಿಸಿ ಚೌಕಾಶಿ ಮಾಡಬಹುದು. ಗುತ್ತಿಗೆ ಕೃಷಿಯಲ್ಲಿನ ಅಸಮಾನತೆಯನ್ನು ವ್ಯವಸ್ಥಿತ ಸ್ವರೂಪದಲ್ಲಿ ಸಮಾನಗೊಳಿಸಬೇಕಿದೆ ಎಂದರು.
ಪ್ರಸ್ತುತ, ಮಾರುಕಟ್ಟೆ ಬೆಲೆಗಳಲ್ಲಿ ಕುಸಿತ ಕಂಡುಬಂದರೆ ಕಂಪನಿಗಳು ಒಪ್ಪಂದಗಳನ್ನು ಕೈಬಿಟ್ಟು ಹೊರಗಡೆ ಖರೀದಿಸುತ್ತವೆ. ಬೆಲೆಗಳಲ್ಲಿ ಏನಾದರೂ ಹೆಚ್ಚಳವಾಗಿದ್ದರೆ ರೈತರು ಒಪ್ಪಂದವನ್ನು ಗೌರವಿಸುತ್ತಿಲ್ಲ. ಇದು ಬದಲಾಗಬೇಕು ಎಂದು ಪಟ್ಟು ಹಿಡಿಯಬಹುದು. ಮಸೂದೆಯ ಪ್ರಕಾರ, ರೈತರು ಮತ್ತು ಕಂಪನಿಗಳ ನಡುವೆ ವಿವಾದವಿದ್ದರೆ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸಿ ನಿರ್ಧರಿಸಬೇಕಾಗುತ್ತದೆ. ಈ ವೇಳೆ ಕೆಲವರು ಶ್ರೀಮಂತರಿಗೆ ಒಲವು ತೋರುವ ಸಾಧ್ಯತೆಯಿದೆ. ಹೀಗಾಗಿ, ರೈತರ ಶೋಷಣೆಯನ್ನು ತಡೆಯಲು ನಿಯಂತ್ರಣ ತರಬೇಕು ಎಂದರು.
ಪ್ರಸ್ತುತ ಸನ್ನಿವೇಶದಲ್ಲಿ ಎಪಿಎಂಸಿ ಮಾರುಕಟ್ಟೆಗಳಲ್ಲಿ ಹೊರಗಿನ ಮಧ್ಯವರ್ತಿಗಳನ್ನು ದೂರ ಇರಿಸಲು ಆಗುವುದಿಲ್ಲ. ಎಪಿಎಂಸಿ ಅಲ್ಲದ ಪ್ರದೇಶಗಳಲ್ಲಿ ಅವುಗಳನ್ನು ನಿರ್ಮೂಲನೆ ಮಾಡುವುದು ಕಷ್ಟವಾಗಿದೆ. ದೊಡ್ಡ ಕಂಪನಿಗಳು ಬಹುತೇಕ ಸಣ್ಣ ಮತ್ತು ಅಲ್ಪ ಹಿಡುವಳಿ ರೈತರನ್ನು ಒಟ್ಟುಗೂಡಿಸಲು ಸಾಧ್ಯವಿಲ್ಲ. ಜೊತೆಗೆ ಅವರೆಲ್ಲಾ ಇಂಟರ್ಲಿಂಕ್ಡ್ ಮಾರುಕಟ್ಟೆ ಎಂಬ ವ್ಯವಸ್ಥೆ ಅನುಸರಿಸುತ್ತಾರೆ. ಇದರಲ್ಲಿ ಬೆಳೆಗಾರರು ಕೃಷಿ ಮಾಡುವ ಮೊದಲು ಮಧ್ಯವರ್ತಿಗಳು ರೈತರಿಗೆ ಸಾಲ ನೀಡುತ್ತಾರೆ. ಇದರಿಂದ ರೈತರು ಮಧ್ಯವರ್ತಿಗಳಿಗೆ ಮಾತ್ರ ಮಾರಾಟ ಮಾಡಬಹುದು ಎಂದರು.
ಅಗತ್ಯ ಸರಕುಗಳ ಕಾಯ್ದೆಯನ್ನು ರದ್ದುಪಡಿಸಬೇಕು ಎಂದು ಹೇಳುತ್ತಿದ್ದಾರೆ. ಈ ಹಂತವು ಸರಿಯಾದ ದಿಕ್ಕಿನಲ್ಲಿದೆ. ಆಹಾರ ಧಾನ್ಯ ಮತ್ತು ಕಾಳುಗಳ ಸಂಗ್ರಹ ತಪ್ಪಿಸಲು ಹಾಗೂ ಗ್ರಾಹಕರು ಮತ್ತು ರೈತರನ್ನು ಶೋಷಣೆಯಿಂದ ರಕ್ಷಿಸಲು ಕೆಲವು ನಿಯಮಗಳನ್ನು ರೂಪಿಸಬೇಕು ಎಂದು ದೇವ್ ಶಿಫಾರಸು ಮಾಡಿದರು.
ನಾವು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ತೆಗೆದುಹಾಕುವುದಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ, ಎಂಎಸ್‌ಪಿಯನ್ನು ನಿಧಾನವಾಗಿ ತೆಗೆದುಹಾಕಬಹುದೆಂದು ರೈತರು ಭಯವಾಗಿದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ ಒಂದು (ಸಿಎಸಿಪಿ) ವರದಿಯು ಎಂಎಸ್‌ಪಿ ರಹಿತ ಮಾರುಕಟ್ಟೆ ಆಧಾರಿತ ಕೃಷಿ ಕ್ಷೇತ್ರಕ್ಕೆ ಪರಿವರ್ತನೆ ಮಾಡಲು ಶಿಫಾರಸು ಮಾಡುತ್ತದೆ. ಇದರಲ್ಲಿ ರೈತರು ಎಂಎಸ್‌ಪಿ ಇಲ್ಲದೆ ಹೆಚ್ಚಿನ ಬೆಲೆ ಪಡೆಯುತ್ತಾರೆ ಎಂದರು.
ಎಂಎಸ್‌ಪಿ ಕೆಲವು ನಿರ್ದಿಷ್ಟ ಸಮಸ್ಯೆಗಳಿವೆ. ಸರ್ಕಾರವು 23 ಬೆಳೆಗಳಿಗೆ ಎಂಎಸ್‌ಪಿ ಘೋಷಿಸುತ್ತದೆ. ಆದರೆ ಎರಡು ಬೆಳೆಗಳಿಗೆ ಮಾತ್ರ ಖರೀದಿ ಮಾಡುತ್ತದೆ. ಅವುಗಳು ಮುಖ್ಯವಾಗಿ ಅಕ್ಕಿ ಮತ್ತು ಗೋಧಿಯಾಗಿವೆ. ಕಳೆದ 50 ವರ್ಷಗಳಿಂದ ಈ ಸ್ಥಿತಿ ಯಥಾವತ್ತಾಗಿ ಮುಂದುವರಿದಿದೆ. ಎಂಎಸ್‌ಪಿ ವ್ಯವಸ್ಥೆಯಿಂದ ಕೇವಲ ಶೇ 10ರಷ್ಟು ರೈತರು ಮಾತ್ರ ಪ್ರಯೋಜನ ಪಡೆಯುತ್ತಾರೆ. ಪಂಜಾಬ್, ಹರಿಯಾಣ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಇದರ ಲಾಭ ಪಡೆಯುವ ಕೆಲವೇ ರಾಜ್ಯಗಳು. ನಾವು ಇತರ ರೈತರ ಆದಾಯವನ್ನು ಸುಧಾರಿಸಬೇಕಿದೆ ಎಂದರು.