ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಅಮೆರಿಕದ ಸಿಯಾಟಲ್ ನಡುವೆ ನಿತ್ಯ ತಡೆರಹಿತ ವಿಮಾನ ಸೇವೆ 2020ರ ಅಕ್ಟೋಬರ್ ತಿಂಗಳಿಂದ ಆರಂಭವಾಗಿದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎಲ್) ಹಾಗೂ ಅಮೆರಿಕ ನಡುವಿನ ಮೊದಲ ತಡೆರಹಿತ ವಿಮಾನ ಹಾರಾಟ ಸೇವೆ ಇದೇ ಮೊದಲನೆಯದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕೆಐಎಲ್ ಮತ್ತು ಸಿಯಾಟಲ್ನ ಟಕೋಮಾ ವಿಮಾನ ನಿಲ್ದಾಣದ ನಡುವಿನ ಹಾರಾಟವು ಕಾರ್ಪೊರೇಟ್ ಗ್ರಾಹಕರ ಬೇಡಿಕೆ ಪೂರೈಸುವ ನಿರೀಕ್ಷೆಯಿದೆ. ಅಮೆರಿಕದ ಸಿಯಾಟಲ್ ನೆರೆ ಹೊರೆಯ ಪ್ರದೇಶಗಳಿಗೆ ಪ್ರಯಾಣಿಸಲು ಈ ಮಾರ್ಗ ಅನುಕೂಲಕರ. ಅಮೆರಿಕನ್ ಏರ್ಲೈನ್ಸ್ ಈ ಸೇವೆ ಒದಗಿಸುತ್ತಿದೆ.
ಬೋಯಿಂಗ್ 787-9 ವಿಮಾನವು 285 ಆಸನಗಳ ಸಾಮರ್ಥ್ಯ ಹೊಂದಿದೆ. ಪ್ರಯಾಣಿಕರು ಸ್ಯಾನ್ ಫ್ರಾನ್ಸಿಸ್ಕೊ, ಸಿಲಿಕಾನ್ ವ್ಯಾಲಿ, ಡೆನ್ವರ್, ಅರಿಜೋನ, ಡಲ್ಲಾಸ್, ಚಿಕಾಗೊ, ಪಶ್ಚಿಮ ಕರಾವಳಿ ಮತ್ತು ಪೂರ್ವ ರಾಜ್ಯಗಳಿಗೆ ವೇಗವಾಗಿ ತಲುಪಬಹುದಾಗಿದೆ. ಬೆಂಗಳೂರು ನಿಲ್ದಾಣ ಪ್ರಸ್ತುತ 28 ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಹಾರಾಟ ಸೇವೆ ಕಲ್ಪಿಸುತ್ತಿದೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಗೂ ಮುನ್ನ ಬೆಂಗಳೂರು-ಅಮೆರಿಕ ನಡುವೆ ನೇರ ಸೇವೆ ಲಭ್ಯವಾಗುತ್ತಿದೆ.