ನವದೆಹಲಿ: ಭಾರತದ ಬ್ಯಾಂಕಿಂಗ್ ಕ್ಷೇತ್ರದ ತೊಂದರೆಗಳು ಹೂಡಿಕೆ ಮತ್ತು ಬೆಳವಣಿಗೆಯ ಮೇಲೆ ಪರಿಣಾಮ ಬೀರಿವೆ ಎಂದು ಮುಖ್ಯ ಆರ್ಥಿಕ ಸಲಹೆಗಾರ (ಸಿಇಎ) ಕೃಷ್ಣಮೂರ್ತಿ ವಿ.ಸುಬ್ರಮಣಿಯನ್ ಹೇಳಿದ್ದಾರೆ.
ಫಿಕ್ಕಿಯ 17ನೇ ವಾರ್ಷಿಕ ಬಂಡವಾಳ ಮಾರುಕಟ್ಟೆ ಸಮ್ಮೇಳನದ 'ಸಿಎಪಿಎಎಂ2020' ಉದ್ದೇಶಿಸಿ ಮಾತನಾಡಿದ ಅವರು, ಈ ವಲಯವು ಪ್ರಮಾಣ ಮತ್ತು ಗುಣಮಟ್ಟದಂತಹ ಎರಡು ಸಮಸ್ಯೆಗಳನ್ನು ಎದುರಿಸುತ್ತಿದೆ. ಎನ್‌ಪಿಎ ಮತ್ತು ರಿಸ್ಕ್ ಮ್ಯಾನೆಜ್ಮೆಂಟ್, ಹೂಡಿಕೆಯ ಮೇಲೆ ಪರಿಣಾಮ ಬೀರಿವೆ. ಇದು ಬೆಳವಣಿಗೆಯ ಮೇಲೆ ಹೊಡೆತ ನೀಡಿದ್ದು, ಅಂತಿಮವಾಗಿ ಬಳಕೆಯನ್ನೇ ತಗ್ಗಿಸಿದೆ ಎಂದು ವ್ಯಾಖ್ಯಾನಿಸಿದರು.
ಭಾರತದಂತಹ ರಾಷ್ಟ್ರಕ್ಕೆ ದೊಡ್ಡ ಬ್ಯಾಂಕ್ಗಳ ಅಗತ್ಯವಿದೆ. ದೊಡ್ಡ ಬ್ಯಾಂಕ್ಗಳ ವಿಷಯದಲ್ಲಿ ಭಾರತವು ತೀರಾ ಹಿಂದುಳಿದಿದೆ. ಅಗ್ರ 100 ಬ್ಯಾಂಕ್ಗಳ ಸಾಲಿನಲ್ಲಿ ಕೇವಲ ಒಂದು ಬ್ಯಾಂಕ್ ಹೊಂದಿದೆ. ಆದರೆ, ಚೀನಾವು 18 ಹಣಕಾಸು ಸಂಸ್ಥೆಗಳನ್ನು ಹೊಂದಿದೆ ಎಂದರು.
ದೊಡ್ಡ ಸಾಲಗಾರರ ಗುಣಮಟ್ಟವು ಉತ್ತಮವಾಗಿಲ್ಲ. ಸಾಲ ನೀಡುವ ಮೊದಲು ಬ್ಯಾಂಕ್ಗಳು ಸಾಲಗಾರರ ಆರ್ಥಿಕ ಸ್ಥಿತಿಯನ್ನು ಪರಿಶೀಲಿಸಬೇಕು. ಸಾಲ ನೀಡುವುದಕ್ಕಿಂತ ಹೆಚ್ಚಾಗಿ ಬ್ಯಾಂಕ್ಗಳು ಹೂಡಿಕೆ ಮಾಡುತ್ತಿವೆ ಎಂದು ಹೇಳಿದರು.
ಪ್ರಸ್ತುತದ ಬ್ಯಾಂಕಿಂಗ್ ಕ್ಷೇತ್ರದೊಂದಿಗೆ ಭಾರತವು ದೊಡ್ಡ ಆರ್ಥಿಕತೆ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂದು 'ಆತ್ಮನಿರ್ಭರ ಭಾರತ ಬಂಡವಾಳ ಮಾರುಕಟ್ಟೆಯ ಪಾತ್ರ' ಎಂಬ ವಿಷಯದ ಕುರಿತು ಮಾತನಾಡಿದರು.