ನವದೆಹಲಿ: ದೇಶದ ಅತಿದೊಡ್ಡ ಕಾರುಗಳ ತಯಾರಕ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾ ತನ್ನ ಡೀಸೆಲ್ ಇಂಜಿನ್ ವಾಹನಗಳ ಮಾರಾಟ ಸ್ಥಗಿತಗೊಳಿಸುವ ಸೂಚಿನ ನೀಡಿದ ಬೆನ್ನಲ್ಲೇ ಫೋರ್ಡ್ ಇಂಡಿಯಾ ಕೂಡ ತನ್ನ ನಿಲುವು ತಿಳಿಸಿದೆ.
ಈ ಬಗ್ಗೆ ಮಾತನಾಡಿದ ಫೋರ್ಡ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ರೈನಾ, ಭಾರತದಲ್ಲಿ ಡೀಸೆಲ್ ಇಂಜಿನ್ ವಾಹನಗಳ ಮಾರಾಟ ನಿಲ್ಲಿಸುವ ಯಾವುದೇ ಚಿಂತನೆ ನಮ್ಮ ಮುಂದೆ ಇಲ್ಲ ಎಂದಿದ್ದಾರೆ.
2020ರ ಏಪ್ರಿಲ್ 1ರ ಗಡುವಿಗೂ ಮೊದಲೇ ಬಿಎಸ್-6 ಮಾನದಂಡಕ್ಕೆ ಅನುಗುಣವಾಗಿ ಡೀಸೆಲ್ ಇಂಜಿನ್ ಮಾದರಿಗಳನ್ನು ಸನ್ನದ್ಧಗೊಂಡಿವೆ. ಭಾರತದ ದೇಶಿ ಗ್ರಾಹಕರಿಗೆ ನೀಡುತ್ತಿರುವ ಆಯ್ಕೆಯ ಅವಕಾಶಗಳನ್ನು ಮುಂದುವರೆಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.
ಒಟ್ಟಾರೆ ವಾಹನ ಖರೀದಿಯಲ್ಲಿ ಪೆಟ್ರೋಲ್ ಇಂಜಿನ್ಗೆ ಹೋಲಿಸಿದರೆ ಶೇ 65ರಷ್ಟು ಜನರು ಡೀಸೆಲ್ ಇಂಜಿನ್ ಇರುವ ಇಕೊಸ್ಪೋರ್ಟ್ಸ್ ಖರೀದಿಸುತ್ತಿದ್ದಾರೆ. ಪ್ರಸ್ತುತ, ಡೀಸೆಲ್ ವಾಹನಗಳಿಗೆ ಬೇಡಿಕೆ ಇದೆ. 2020ರ ಬಳಿಕವೂ ಈ ಬೇಡಿಕೆ ಹೆಚ್ಚಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಎಸ್- 6ನಿಂದಾಗಿ ವಾಹನಗಳ ಬೆಲೆ ಶೇ 8ರಿಂದ ಶೇ 10ರ ವರೆಗೂ ಏರಿಕೆಯಾಗಲಿದೆ. ಡೀಸೆಲ್ ವಾಹನಗಳ ಬೆಲೆಯಲ್ಲಿ ಮಾತ್ರವೇ ಏರಿಕೆ ಆಗುವುದಿಲ್ಲ. ಇವುಗಳ ಜೊತೆಗೆ ಎಲ್ಲ ಮಾದರಿಯಾ ಕಾರುಗಳ ಬೆಲೆ ಹೆಚ್ಚಳವಾಗಲಿದೆ ಎಂದು ರೈನಾ ತಿಳಿಸಿದ್ದಾರೆ.