ನವದೆಹಲಿ: ದೇಶ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳಾದ ವೊಡಾಫೋನ್- ಐಡಿಯಾ ಮತ್ತು ಭಾರ್ತಿ ಏರ್ಟೆಲ್ ಕಂಪನಿಗಳು ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲಿ 49 ಲಕ್ಷ ಬಳಕೆದಾರರನ್ನು ಕಳೆದುಕೊಂಡಿದೆ. ಇದೇ ಸಮಯದಲ್ಲಿ ರಿಲಯನ್ಸ್ ಜಿಯೋಗೆ 69.83 ಲಕ್ಷ ಹೊಸ ಬಳಕೆದಾರರು ಸೇರ್ಪಡೆ ಆಗಿದ್ದಾರೆ ಎಂದು ಟೆಲಿಕಾಂ ವಲಯದ ನಿಯಂತ್ರಕ ಟ್ರಾಯ್ ಮಾಹಿತಿ ನೀಡಿದೆ.
ಭಾರತದಲ್ಲಿ ಆಗಸ್ಟ್ ಅಂತ್ಯದ ವೇಳೆಗೆ ಒಟ್ಟು 117.1 ಕೋಟಿಯಿದ್ದ ವೈರ್ಲೆಸ್ ಚಂದಾದಾರರ ಸಂಖ್ಯೆ (ಜಿಎಸ್ಎಂ, ಸಿಡಿಎಂಎ ಮತ್ತು ಎಲ್‌ಟಿಇ) 2019ರ ಸೆಪ್ಟೆಂಬರ್ ಅಂತ್ಯದ ವೇಳೆಗೆ 117.37 ಕೋಟಿಗೆ ಏರಿಕೆಯಾಗಿದೆ. ಮಾಸಿಕ ಶೇ 0.23 ರಷ್ಟು ಬೆಳವಣಿಗೆ ಕಾಯ್ದುಕೊಂಡಿದೆ. ನಗರ ಪ್ರದೇಶಗಳಲ್ಲಿ ವೈರ್ಲೆಸ್ ಚಂದಾದಾರಿಕೆ ಸೆಪ್ಟೆಂಬರ್ ಅಂತ್ಯದ ವೇಳೆಗೆ 65.91 ಕೋಟಿಗೆ ಇಳಿದಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 51.45 ಕೋಟಿಗೆ ಏರಿಕೆಯಾಗಿದೆ.
ಭಾರ್ತಿ ಏರ್ಟೆಲ್ ಸೆಪ್ಟೆಂಬರ್ನಲ್ಲಿ 23.8 ಲಕ್ಷ ಬಳಕೆದಾರರನ್ನು ಕಳೆದುಕೊಂಡು, ಒಟ್ಟು 32.55 ಕೋಟಿಗೆ ತಲುಪಿದೆ. ವೊಡಾಫೋನ್- ಐಡಿಯಾ 25.7 ಲಕ್ಷ ಬಳಕೆದಾರರನ್ನು ಕಳೆದುಕೊಂಡು 37.24 ಕೋಟಿಗೆ ಬಂದು ನಿಂತಿದೆ. ಇದೇ ಅವಧಿಯಲ್ಲಿ ರಿಲಯನ್ಸ್ ಜಿಯೋ 69.83 ಲಕ್ಷ ಬಳಕೆದಾರರನ್ನು ಸೇರಿಸಿಕೊಂಡು ಒಟ್ಟು ಸಂಖ್ಯೆ 35.52 ಕೋಟಿಗೆ ಏರಿಸಿಕೊಂಡಿದೆ.
2019ರ ಸೆಪ್ಟೆಂಬರ್ 30ರ ಹೊತ್ತಿಗೆ ವೊಡಾಫೋನ್- ಐಡಿಯಾವು ಮಾರುಕಟ್ಟೆಯಲ್ಲಿ ಶೇ 31.73 ರಷ್ಟು ಚಂದಾದಾರರ ಪಾಲನ್ನು ಹೊಂದಿದ್ದರೆ, ಜಿಯೋ ಶೇ 30.26 ರಷ್ಟು ಮತ್ತು ಭಾರ್ತಿ ಏರ್ಟೆಲ್ ಶೇ 27.74 ರಷ್ಟನ್ನು ಪಾಲು ಹೊಂದಿದೆ.
ಸರ್ಕಾರಿ ಸ್ವಾಮ್ಯದ ಎಂಟಿಎನ್ಎಲ್ 8,717 ಬಳಕೆದಾರರನ್ನು ಕಳೆದುಕೊಂಡರೆ (33.93 ಲಕ್ಷ ಬಳಕೆದಾರರ ಸಂಖ್ಯೆ), ಬಿಎಸ್ಎನ್ಎಲ್ 7.37 ಲಕ್ಷ ಬಳಕೆದಾರರನ್ನು ತನ್ನ ಕುಟುಂಬಕ್ಕೆ ಸೇರಿಸಿಕೊಂಡಿದೆ ಮತ್ತು ಅದರ ಒಟ್ಟು ಬಳಕೆದಾರರ ಸಂಖ್ಯೆ 11.69 ಕೋಟಿಗೆ ತಲುಪಿದೆ. ಭಾರತದಲ್ಲಿ ವೈರ್ಲೆಸ್ ದೂರವಾಣಿ ದಟ್ಟಣೆ ಆಗಸ್ಟ್ ಅಂತ್ಯದಲ್ಲಿ 88.77 ರಷ್ಟು ಇದದ್ದು, ಸೆಪ್ಟೆಂಬರ್ ಅಂತ್ಯದ ವೇಳೆಗೆ 88.90ಕ್ಕೆ ಏರಿದೆ ಎಂದು ಟ್ರಾಯ್ ತಿಳಿಸಿದೆ.