ಸ್ಯಾನ್ಫ್ರಾನ್ಸಿಸ್ಕೋ: ಚೀನಾದ ಹುವಾಯಿ ಕಂಪನಿಯ ಸಂಬಂಧದ ಬಗ್ಗೆ ಉತ್ತರ ಕೋರಿ ಅಮೆರಿಕದ ಮೂವರು ಸೆನೆಟರ್‌ಗಳು ಭಾರತೀಯ ಮೂಲದ ಗೂಗಲ್ ಸಿಇಒ ಸುಂದರ್ ಪಿಚೈ ಅವರಿಗೆ ಪತ್ರ ಬರೆದಿದ್ದಾರೆ.
ಗೂಗಲ್ ಮತ್ತು ಹುವಾಯಿ ಕಂಪನಿ ಜಂಟಿಯಾಗಿ ಸ್ಮಾರ್ಟ್ ಸ್ಪೀಕರ್ ಉತ್ಪನ್ನ ತಯಾರಿಕೆಗೆ ಸಹಕರಿಸುತ್ತಿದೆ ಹಾಗೂ ಈ ಹಿಂದೆ ಮಾಡಿಕೊಂಡಿದ್ದ ಒಪ್ಪಂದಗಳ ಕುರಿತು ಸ್ಪಷ್ಟನೆ ನೀಡುವಂತೆ ಬುಧವಾರ ಪತ್ರ ಬರೆದು ಸುಂದರ್ ಪಿಚೈ ಅವರಿಗೆ ಕಳುಹಿಸಲಾಗಿದೆ.
ವಿಶ್ವಾಸಾರ್ಹವಲ್ಲದ ಕಂಪನಿ ತಯಾರಿಸುವ ಸಾಧನಗಳ ಮುಖೇನ ಅಮೆರಿಕನ್ನರ ಸಂಭಾಷಣೆಗಳನ್ನು ಕೇಳಲು ಅನುವು ಮಾಡಿಕೊಡುವುದು ಸಲ್ಲದು. ಮೂರು ವಾರಗಳ ಹಿಂದಿನ ನಿಮ್ಮ ಮತ್ತು ಚೀನಾ ಕಂಪನಿಯೊಂದಿಗೆ ಪಾಲ್ಗೊಳ್ಳುವಿಕೆಯ ಪ್ರಯತ್ನ ಹಾಗೂ ಹುವಾಯಿ ಜೊತೆಗಿನ ಹೊಸ ಸಂಬಂಧ ಹಲವು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಸೆನೆಟರ್‌ಗಳು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಲಕ್ಷಾಂತರ ಅಮೆರಿಕನರ ಮನೆಗಳಲ್ಲಿ ಹುವಾಯಿನ ಧ್ವನಿ ವರ್ಧಕ ಸಾಧನಗಳನ್ನು ಇರಿಸಲು ಸಹಾಯ ಮಾಡುವ ನಿಮ್ಮ ನಿರ್ಧಾರ, ದೇಶಕ್ಕೆ ಲಾಭ ನೀಡುವುದನ್ನು ಬಿಟ್ಟು ಬೇರೆ ಏನಾದರೂ ಇದೆಯಾ ಎಂಬುದನ್ನೂ ವ್ಯಾಖ್ಯಾನಿಸುವುದು ಸಹ ಕಷ್ಟವೆಂದು ಪತ್ರದಲ್ಲಿ ತಿಳಿಸಿದ್ದಾರೆ. ಜೊತೆಗೆ ಆಗಸ್ಟ್ 30ರ ಒಳಗೆ ತಮ್ಮ ಪ್ರಶ್ನೆಗಳಿಗೆ ಉತ್ತರಿಸುವಂತೆಯೂ ಗಡುವು ನೀಡಿದ್ದಾರೆ.