ನವದೆಹಲಿ: ಪ್ರಸಕ್ತ ಆರ್ಥಿಕ ವರ್ಷದ ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕ ಮತ್ತು ಅರ್ಧ ವಾರ್ಷಿಕದಲ್ಲಿ ಟಾಟಾ ಸ್ಟೀಲ್ಗೆ ತೆರಿಗೆ ನಂತರದ ಏಕೀಕೃತ ಲಾಭಾಂಶ (ಪಿಎಟಿ) ₹ 3,302 ಕೋಟಿ ಆಗಿದೆ ಎಂದು ತಿಳಿಸಿದೆ.
ಎರಡನೇ ತ್ರೈಮಾಸಿಕದಲ್ಲಿನ ಒಟ್ಟು ವಹಿವಾಟು ₹ 1,11,549 ಕೋಟಿ ಹಾಗೂ ನಿವ್ವಳ ವಹಿವಾಟು ಪ್ರಮಾಣ ₹ 1,06,952 ಕೋಟಿಯಷ್ಟಿದೆ. ಇದೇ ವೇಳೆ ಅನುಕೂಲಕರ ತೆರಿಗೆ ಪರಿಣಾಮವು ₹ 4,233 ಕೋಟಿಯಷ್ಟು ಆಗಿದೆ ಎಂದು ಟಾಟಾ ಸ್ಟೀಲ್ ಹೇಳಿದೆ.
ಇತ್ತೀಚೆಗಿನ ಕಾರ್ಪೊರೇಟ್ ತೆರಿಗೆ ಕಡಿತವು ಟಾಟಾ ಸ್ಟೀಲ್ ಒಂದೇ ಅಂಗ ಸಂಸ್ಥೆಗೆ ₹ 2,425 ಕೋಟಿಯಷ್ಟು ಉಳಿಕೆ ಆಗಿದೆ. ಸಾಗರೋತ್ತರ ಇರುವ ಅಂಗ ಸಂಸ್ಥೆಗಳ ತೆರಿಗೆ ಸ್ವತ್ತು ಸೇರಿದಂತೆ ಇತರ ಮೂಲಗಳಿಂದ ಸುಮಾರು ₹ 1,808 ಕೋಟಿ ಆದಾಯ ಬಂದಿದೆ ಎಂದು ತನ್ನ ವರದಿಯಲ್ಲಿ ಹೇಳಿದೆ.
ಉಕ್ಕಿನ ಉತ್ಪಾದನೆಯು 6.95 ದಶಲಕ್ಷ ಟನ್‌ಗಳಷ್ಟಿದ್ದರೆ ವಿತರಣೆಯು ಶೇ 3ರಷ್ಟು ಏರಿಕೆಯಾಗಿ 6.53 ದಶಲಕ್ಷ ಟನ್‌ಗೆ ತಲುಪಿದೆ. ಏಕೀಕೃತ ಆದಾಯವು ₹ 34,579 ಕೋಟಿ ರೂ. ಆಗಿದ್ದರೆ ಭಾರತದಲ್ಲಿನ ಆದಾಯವು ₹ 20,204 ಕೋಟಿಯಷ್ಟಿದೆ. ಆದಾಯ, ಬಡ್ಡಿ, ತೆರಿಗೆ, ಸವಕಳಿ ಮತ್ತು ಭೋಗ್ಯ (ಇಬಿಐಟಿಡಿಎ) ₹ 4,018 ಕೋಟಿ ಹಾಗೂ ಭಾರತದಲ್ಲಿ ಇಬಿಐಟಿಡಿಎ ₹ 3,817 ಕೋಟಿಯಷ್ಟಿದೆ ಎಂದು ಕಂಪನಿ ತ್ರೈ ಮಾಸಿಕ ವರದಿಯಲ್ಲಿ ತಿಳಿಸಿದೆ.