ಮುಂಬೈ: ಎಲೆಕ್ಟ್ರಿಕ್ ವಾಹನಗಳ ಮೇಲಿನ ಜಿಎಸ್‌ಟಿ ಸ್ಲ್ಯಾಬ್ಅನ್ನು ಶೇ. 5ಕ್ಕೆ ಇಳಿಸಿದ ಜಿಎಸ್‌ಟಿ ಮಂಡಳಿಯ ನಿರ್ಧಾರವನ್ನು ಅನುಸರಿಸಿದ ಟಾಟಾ ಮೋಟಾರ್ಸ್, ತನ್ನ ಎಲೆಕ್ಟ್ರಿಕ್ ವಾಹನ (ಇವಿ) ಬೆಲೆಯನ್ನು 80,000 ರೂ. ಕಡಿತಗೊಳಿಸಿದೆ.
ಪರಿಷ್ಕೃತ ಕಡಿತವು ಟಾಟಾ ಮೋಟಾರ್ಸ್ನ ದೇಶಿ ಮಾರುಕಟ್ಟೆಯ ಟೈಗೋರ್ ಇವಿಯ ಎಲ್ಲ ಮಾದರಿಯ ಕಾರುಗಳಿಗೆ ಇದು ಅನ್ವಯವಾಗಲಿದೆ ಎಂದು ಗುರುವಾರ ತಿಳಿಸಿದೆ.
ವಿದ್ಯುತ್ ಚಾಲಿತ ಎಲ್ಲ ವಾಹನಗಳ ಜಿಎಸ್‌ಟಿ ಸ್ಲ್ಯಾಬ್ ದರ ಶೇ. 15ರಿಂದ ಶೇ. 5ಕ್ಕೆ ಇಳಿಸುವುದಾಗಿ ಇಚೇಗೆ ನಡೆದ ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಘೋಷಿಸಲಾಗಿತ್ತು. ನೂತನ ತೆರಿಗೆಯು ಇಂದಿನಿಂದ (ಆ.1ರಿಂದ) ಜಾರಿಗೆ ಬರುತ್ತಿದ್ದು, ಟಾಟಾ ಮೋಟಾರ್ಸ್ ತನ್ನ ಎಲೆಕ್ಟ್ರಿಕ್ ವಾಹನಗಳ ಬೆಲೆಯಲ್ಲಿ ₹ 80,000 ಕಡಿತಗೊಳಿಸಿದೆ ಎಂದು ಎಲೆಕ್ಟ್ರಿಕ್ ಮೊಬಿಲಿಟಿ ವ್ಯವಹಾರ ಮತ್ತು ಕಾರ್ಪೋರೇಟ್ ತಂತ್ರದ ಅಧ್ಯಕ್ಷ ಶೈಲೇಶ್ ಚಂದ್ರ ಹೇಳಿದ್ದಾರೆ.
ದರ ಕಡಿತವು 'ಟೈಗೋರ್ ಇವಿ - ಎಕ್ಸ್‌ಇ' (ಬೇಸ್), 'ಎಕ್ಸ್‌ಎಂ' (ಪ್ರೀಮಿಯಂ) ಮತ್ತು 'ಎಕ್ಸ್‌ಟಿ'ಗೆ (ಹೈ) ಅನ್ವಯಿಸಲಿದೆ. ಟಾಟಾ ಟೈಗೋರ್ ಇವಿ ಕಾರಿನ ಈ ಹಿಂದಿನ ದರ ₹ 12.35 ಲಕ್ಷ ಇತ್ತು. ಈಗ ಗ್ರಾಹಕರಿಗೆ ₹ 11.58 ಲಕ್ಷ ಬೆಲೆಯಲ್ಲಿ ಲಭ್ಯವಾಗಲಿದೆ ಎಂದು ಕಂಪನಿ ತಿಳಿಸಿದೆ.
ಇದರಲ್ಲಿ 16.2 ಕಿ.ವ್ಯಾಟ್ ಸಾಮರ್ಥ್ಯದ ಬ್ಯಾಟರಿ ಇದ್ದು, 90 ನಿಮಿಷದಲ್ಲಿ ಶೇ. 80ರಷ್ಟು ಚಾರ್ಜ್ ಆಗುತ್ತದೆ. ಸುಮಾರು 36 ನಿಮಿಷದಲ್ಲಿ ಶೇ. 30ರಷ್ಟು ಬ್ಯಾಟರಿ ಚಾರ್ಜ್ ಆಗಲಿದ್ದು, ಅಂದಾಜು 35 ಕಿ.ಮೀ. ಸಂಚರಿಸಬಹುದು.
ತಾಂತ್ರಿಕವಾಗಿ 1,126 ಕೆಜಿಯಷ್ಟು ಕಾರು ಭಾರವಾಗಿದೆ. 72ವೋ 3 ಫಾಸ್ ಎಸಿ ಇಂಡಕ್ಷನ್ ಮೋಟಾರು ಹೊಂದಿದೆ. 105ಎನ್ಎಂ ಟಾರ್ಕ್, 16.2 ಕಿ.ವ್ಯಾ. ಬ್ಯಾಟರಿ ಸಾಮರ್ಥ್ಯವಿದೆ. ಒಮ್ಮೆ ಚಾರ್ಜ್ ಮಾಡಿದರೆ 142 ಕಿ.ಮೀ. ದೂರ ಕ್ರಮಿಸುತ್ತದೆ.