ಮುಂಬೈ: ಟಾಟಾ ಎಐಎ ಜೀವ ವಿಮೆ ಕಂಪನಿಯು ತನ್ನ ಎಲ್ಲ ಪಾಲಿಸಿದಾರರಿಗೆ ಕೋವಿಡ್-19ಗೆ ಸಂಬಂಧಿಸಿದಂತೆ ₹ 5 ಲಕ್ಷದ ಹೆಚ್ಚುವರಿ ಪ್ರಯೋಜನ ಒದಗಿಸಲಿದೆ ಎಂದು ತಿಳಿಸಿದೆ.
ಈ ಹೆಚ್ಚುವರಿ ಪ್ರಯೋಜನ ಪಡೆಯಲು ಪಾಲಿಸಿದಾರರು ಯಾವುದೇ ಅಧಿಕ ಶುಲ್ಕ ಪಾವತಿಸಬೇಕಾಗಿಲ್ಲ. ಪಾಲಿಸಿದಾರರು ಕೋವಿಡ್-19ನಿಂದಾಗಿ ಮೃತಪಟ್ಟರೆ ಅವರ ಕುಟುಂಬಕ್ಕೆ ಈ 5 ಲಕ್ಷ ರೂ. ಹೆಚ್ಚುವರಿ ವಿಮೆ ಪರಿಹಾರ ಒದಗಿಸಲಾಗುವುದು. ಈ ವರ್ಷದ ಜೂನ್ 30ರವರೆಗೆ ಈ ಸೌಲಭ್ಯ ಜಾರಿಯಲ್ಲಿ ಇರಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಂಪನಿಯ ಎಲ್ಲ ಸಕ್ರಿಯ ಏಜೆಂಟರ ಅವಲಂಬಿತರು ಕೋವಿಡ್-19 ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ದಾಖಲಾದರೆ ಚಿಕಿತ್ಸಾ ವೆಚ್ಚಕ್ಕಾಗಿ 25,000 ರೂ. ನೆರವು ಸಹ ನೀಡಲಾಗುವುದು ಎಂದು ಕಂಪನಿ ಹೇಳಿದೆ.
ನಾವೆಲ್ಲರೂ ಒಟ್ಟಾಗಿ ಹಿಂದೆಂದೂ ಇಲ್ಲದಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದೇವೆ. ನಮ್ಮಲ್ಲಿ ಪ್ರತಿಯೊಬ್ಬರೂ ಮುಂದೆ ಬಂದು ಸಮಾಜಕ್ಕೆ ಸೇವೆ ಸಲ್ಲಿಸಲು ಇದೊಂದು ಅವಕಾಶ. ನಮಗೆ ರಕ್ಷಣೆ ಎನ್ನುವುದು ಸಮಾಜಕ್ಕೆ ಸೇವೆ ಸಲ್ಲಿಸುವ ಮಾರ್ಗವಾಗಿದೆ. ನಮ್ಮ ಗ್ರಾಹಕರು ಮತ್ತು ಏಜೆಂಟರು ಮನೆಯಲ್ಲಿ ಸುರಕ್ಷಿತವಾಗಿರಲು ಡಿಜಿಟಲ್ ಮೂಲಕ ಶಕ್ತಗೊಳಿಸುವ ಮೂಲಕ ನಾವು ಇದನ್ನು ಮಾಡಿದ್ದೇವೆ. ನಮ್ಮ ಗ್ರಾಹಕರಿಗೆ ಅವರ ಎಲ್ಲ ಅಗತ್ಯಗಳಿಗಾಗಿ 24/7 ಸೇವೆ ಲಭ್ಯವಾಗಲಿದೆ. ಪಾಲಿಸಿದಾರರಿಗೆ ನೀಡಿದ ಭರವಸೆಯನ್ನು ಎತ್ತಿ ಹಿಡಿಯುತ್ತಿದ್ದೇವೆ ಎಂದು ಟಾಟಾ ಎಐಎ ಜೀವ ವಿಮೆಯ ಎಂಡಿ ಮತ್ತು ಸಿಇಒ ರಿಷಿ ಶ್ರೀವಾಸ್ತವ್ ಹೇಳಿದರು.