ನವದೆಹಲಿ: ಆಹಾರ ವಿತರಣಾ ಫ್ಲಾಟ್ಫಾರ್ಮ್ ಸ್ವಿಗ್ಗಿ, ಮುಂದಿನ 18 ತಿಂಗಳಲ್ಲಿ 3 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಯೋಜನೆ ರೂಪಿಸಿದೆ.
ಈಗಿನ 2 ಲಕ್ಷ ನೌಕರರ ಜೊತೆಗೆ ಹೊಸದಾಗಿ 3 ಲಕ್ಷ ಉದ್ಯೋಗಿಗಳನ್ನು ಸೇರ್ಪಡೆ ಮಾಡಿಕೊಳ್ಳುವ ಮೂಲಕ ತನ್ನ ಒಟ್ಟಾರೆ ಮಾನವ ಸಂಪನ್ಮೂಲವನ್ನು 5 ಲಕ್ಷಕ್ಕೆ ತೆಗೆದುಕೊಂಡು ಹೋಗಲಿದೆ. ಯೋಜಿತ ಉದ್ದೇಶ ಜಾರಿಯಾದರೇ ಸ್ವಿಗ್ಗಿ ದೇಶದ ಮೂರನೇ ಅತಿದೊಡ್ಡ ಉದ್ಯೋಗದಾತ ಕಂಪನಿಯಾಗಿ ಹೊರಹೊಮ್ಮಲಿದೆ.
ಗೀಗಾಬೈಟ್ ತಂತ್ರಜ್ಞಾನ ಸಮ್ಮೇಳನದಲ್ಲಿ ಸ್ವಿಗ್ಗಿ ಸಹ ಸಂಸ್ಥಾಪಕ ಮತ್ತು ಸಿಇಒ ಶ್ರೀಹರ್ಷ ಮಜೆಟಿ ಮಾತನಾಡಿ, ನಮ್ಮ ಕೆಲವು ಉದ್ದೇಶಿತ ಬೆಳವಣಿಗೆಗಳು ಕಾರ್ಯರೂಪಕ್ಕೆ ಬಂದರೇ ನಮ್ಮದು ದೇಶದ ಮೂರನೇ ಅತಿದೊಡ್ಡ ಉದ್ಯೋಗದಾತ ಕಂಪನಿ ಆಗಲಿದೆ. ಹಲವು ವರ್ಷಗಳಿಂದ ಹೆಚ್ಚಿನ ಜನರಿಗೆ ಉದ್ಯೋಗ ನೀಡಿಕೊಂಡು ಬರುತ್ತಿರುವ ಭಾರತೀಯ ರೈಲ್ವೆ ಹಾಗೂ ಸೇನೆಯ ಬಳಿಕದ ಸ್ಥಾನ ಸ್ವಿಗ್ಗಿ ಪಡೆಯಲಿದೆ ಎಂದರು.
2018ರ ಮಾರ್ಚ್ ಅಂತ್ಯದ ವೇಳೆಗೆ ಭಾರತೀಯ ಸೇನೆ 12.5 ಲಕ್ಷ ಹಾಗೂ ರೈಲ್ವೆ ಇಲಾಖೆಯು 12 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಂಡಿದೆ. ಐಟಿ ವಲಯದ ದಿಗ್ಗಜ ಕಂಪನಿ ಟಿಸಿಎಸ್ 4.5 ಲಕ್ಷ ಉದ್ಯೋಗಿಗಳನ್ನು ಸೆಪ್ಟೆಂಬರ್ 2019ರ ಒಳಗೆ ಹೊಂದಿದೆ. ಈ ಮಾದರಿಯ ಉದ್ಯೋಗಗಳನ್ನು ಸ್ವಿಗ್ಗಿ ನೀಡಲು ಮುಂದಾಗಿದೆ.