ಬೆಂಗಳೂರು: ಇನ್ಫೋಸಿಸ್ ತನ್ನ ನೂರಾರು ಉದ್ಯೋಗಿಗಳು ಮತ್ತು ಅವರ ಕುಟುಂಬದವರನ್ನು ಚಾರ್ಟೆಡ್ ವಿಮಾನದಲ್ಲಿ ಅಮೆರಿಕದಿಂದ ಭಾರತಕ್ಕೆ ವಾಪಸ್ ಕರೆ ತಂದಿದೆ.
ಜಾಗತಿಕ ಸಾಫ್ಟ್‌ವೇರ್ ದೈತ್ಯ ಇನ್ಫೋಸಿಸ್, ತನ್ನ ಕೆಲವು ಟೆಕ್ಕಿಗಳು ಮತ್ತು ಅವರ ಕುಟುಂಬಸ್ಥರನ್ನು ಅಮೆರಿಕದಿಂದ ಬೆಂಗಳೂರಿಗೆ ಚಾರ್ಟರ್ಡ್ ವಿಮಾನದಲ್ಲಿ ಕರೆತಂದಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ನಡುವೆ ವಿಮಾನ ಹಾರಾಟ ನಡೆಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೆಲವು ಉದ್ಯೋಗಿಗಳು ಮತ್ತು ಅವರ ಕುಟುಂಬಸ್ಥರನ್ನು ಭಾರತಕ್ಕೆ ವಾಪಸ್ ಕರೆತರಲು ಇನ್ಫೋಸಿಸ್ ವಿಮಾನವೊಂದನ್ನು ನಿಯೋಜಿಸಿತ್ತು. ಟೆಕ್ಕಿಗಳು ಮತ್ತು ಅವರ ಸಂಬಂಧಿಕರು ವಿಶೇಷ ವಿಮಾನದ ಮೂಲಕ ಸೋಮವಾರ ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ ಎಂದು ಇನ್ಫಿ ವಕ್ತಾರರು ತಿಳಿಸಿದ್ದಾರೆ.
ವಿಮಾನವು ಈಗಾಗಲೇ ಬೆಂಗಳೂರಿಗೆ ಬಂದಿರುವುದರಿಂದ ಹೆಚ್ಚುವರಿ ವಿವರಗಳನ್ನು ಹಂಚಿಕೊಳ್ಳಲು ನಮಗೆ ಸಾಧ್ಯವಾಗುವುದಿಲ್ಲ ಎಂದರು.
ವಿಶೇಷ ವಿಮಾನ ಹಾರಾಟದ ಬಗ್ಗೆ ಒಂದೆರಡು ಇನ್ಫೋಸಿಸ್ ಉದ್ಯೋಗಿಗಳು ಟ್ವೀಟ್ ಮಾಡಿದ್ದಾರೆ.
ಇನ್ಫೋಸಿಯಾನ್ಸ್ ಮತ್ತು ಕುಟುಂಬಸ್ಥರನ್ನು ಸ್ವಾಗತಿಸಲಾಗುತ್ತಿದೆ! ಲಾಕ್ಡೌನ್ ನಂತರ ಅಮೆರಿಕದಿಂದ ವಿಶೇಷ ವಿಮಾನ ಹಾರಾಟದ ಮೂಲಕ ಮರಳುತ್ತೇವೆ ಎಂದು ಉದ್ಯೋಗಿಯೊಬ್ಬರು ಸೋಮವಾರ ಟ್ವೀಟ್ ಮಾಡಿದ್ದರು.