ಮುಂಬೈ: ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಪ್ರಸಕ್ತ 2020-21ರ ಆರ್ಥಿಕ ವರ್ಷದ ಎರಡನೇ ತ್ರೈಮಾಸಿಕದಲ್ಲಿ ನಿವ್ವಳ ಲಾಭದಲ್ಲಿ ಶೇ 52ರಷ್ಟು ಏರಿಕೆ ದಾಖಲಿಸಿದೆ.
ಬ್ಯಾಂಕ್ ಹೆಚ್ಚಿನ ಬಡ್ಡಿ ಆದಾಯ ಮತ್ತು ವಸೂಲಾಗದ ಸಾಲ ನಿಬಂಧನೆಗಳ ಕುಸಿತವು ದಾಖಲೆಯ ಮಟ್ಟದ ಆದಾಯ ಏರಿಕೆ ಕಾರಣವಾಯಿತು. ಸೆಪ್ಟೆಂಬರ್ ತ್ರೈಮಾಸಿಕದಲ್ಲಿ ಬ್ಯಾಂಕ್ನ ನಿವ್ವಳ ಲಾಭ 4,574 ಕೋಟಿ ರೂ.ಗೆ ಏರಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 3,011 ಕೋಟಿ ರೂ.ನಷ್ಟಿತ್ತು. ತ್ರೈಮಾಸಿಕ ಆಧಾರದ ಮೇಲೆ 2021ರ ಹಣಕಾಸು ವರ್ಷದ ಮೊದಲನೇ ತ್ರೈಮಾಸಿಕದಲ್ಲಿ ವರದಿಯಾದ 4,189.3 ಕೋಟಿ ರೂ.ಗಳಿಂದ ಲಾಭಾಂಶವು ಶೇ 9ರಷ್ಟು ಏರಿಕೆಯಾಗಿದೆ.
ನಿವ್ವಳ ಎನ್‌ಪಿಎ ಒಟ್ಟು ಆಸ್ತಿ ಪ್ರಮಾಣ ಶೇ 1.59ಕ್ಕೆ ಇಳಿದಿದ್ದರೆ, ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ ಶೇ. 2.79ರಷ್ಟಿತ್ತು. ಒಟ್ಟು ಎನ್‌ಪಿಎ ಶೇ 5.28 ರಷ್ಟಿದ್ದು, ಇದು ವರ್ಷದ ಹಿಂದೆ ಶೇ 7.19ರಲ್ಲಿತ್ತು.
ಸೆಪ್ಟೆಂಬರ್ 30ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ನೌಕರರ ವೇತನ ಪರಿಷ್ಕರಣೆಗೆ 2,214 ಕೋಟಿ ರೂ. ನೀಡಲಾಗಿದೆ. 2017ರ ನವೆಂಬರ್ 1ರಿಂದ ಸೆಪ್ಟೆಂಬರ್ 30ರವರೆಗೆ ಈ ಖಾತೆಯ ಒಟ್ಟು ಸಂಚಿತ ನಿಬಂಧನೆ 12,470.41 ಕೋಟಿ ರೂ.ನಷ್ಟಿದೆ. 2ನೇ ತ್ರೈಮಾಸಿಕ ಫಲಿತಾಂಶ ಅನುಸರಿಸಿ, ಎಸ್‌ಬಿಐನ ಷೇರು ಮೌಲ್ಯ ಮಧ್ಯಾಹ್ನದ ವೇಳೆಗೆ ಶೇ 1ರಷ್ಟು ಕುಸಿಯಿತು. ಮಧ್ಯಾಹ್ನ 2:40ರ ಹೊತ್ತಿಗೆ ಕುಸಿತವನ್ನು ಚೇತರಿಸಿಕೊಂಡಿತು.