ನವದೆಹಲಿ: ಆರು ಬ್ಯಾಂಕ್‌ಗಳ ಒಕ್ಕೂಟಕ್ಕೆ 411 ಕೋಟಿ ರೂ. ಸಾಲ ವಂಚನೆ ಎಸಗಿದ್ದು, ಸಿಬಿಐ ಈ ಬಗ್ಗೆ ರಾಮ್ ದೇವ್ ಇಂಟರ್‌ನ್ಯಾಷನಲ್‌ನ ಮೂವರು ಪ್ರವರ್ತಕರ ವಿರುದ್ಧ ದೂರ ದಾಖಲಿಸಿಕೊಂಡಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ದೂರಿನೊಂದಿಗೆ ತನಿಖಾ ತಂಡದ ಅಧಿಕಾರಿಗಳು ತಲುಪುವ ಮೊದಲೇ ಆರೋಪಿತ ಪ್ರವರ್ತಕರು ದೇಶ ಬಿಟ್ಟು ಓಡಿಹೋಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಷ್ಟವನ್ನು ಅನುಭವಿಸಿದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ದೂರಿನ ಆಧಾರದ ಮೇಲೆ ಸಿಬಿಐ ಇತ್ತೀಚೆಗೆ ಪಶ್ಚಿಮ ಏಷ್ಯಾ ಮತ್ತು ಯುರೋಪಿಯನ್ ದೇಶಗಳಿಗೆ ಬಾಸ್ಮತಿ ಅಕ್ಕಿ ರಫ್ತು ಮಾಡುವ ಕಂಪನಿಯ ನಿರ್ದೇಶಕರಾದ ನರೇಶ್ ಕುಮಾರ್, ಸುರೇಶ್ ಕುಮಾರ್ ಮತ್ತು ಸಂಗಿತಾ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು.
ಈ ಕಂಪನಿಯು ಮೂರು ಅಕ್ಕಿ ಮಿಲ್ಲಿಂಗ್ ಸ್ಥಾವರಗಳನ್ನು ಹೊಂದಿದೆ. ಕರ್ನಾಲ್ ಜಿಲ್ಲೆಯಲ್ಲಿ ಎಂಟು ವಿಂಗಡಣೆ ಮತ್ತು ಶ್ರೇಣೀಕರಣ ಘಟಕಗಳನ್ನು ಹೊರತುಪಡಿಸಿ ಸೌದಿ ಅರೇಬಿಯಾ ಮತ್ತು ದುಬೈನಲ್ಲಿ ಕಚೇರಿಗಳನ್ನು ಸಹ ಹೊಂದಿದೆ ಎಂದು ಎಸ್‌ಬಿಐ ದೂರಿನಲ್ಲಿ ತಿಳಿಸಲಾಗಿದೆ.
ಎಸ್‌ಬಿಐ ಒಕ್ಕೂಟದ ಕೆನರಾ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಐಡಿಬಿಐ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಕಾರ್ಪೊರೇಷನ್ ಬ್ಯಾಂಕ್ಗಳಿಂದ ಸಾಲ ಪಡೆದು ಮರುಪಾವತಿಸದೇ ವಿದೇಶಕ್ಕೆ ಪರಾರಿ ಆಗಿದ್ದಾರೆ.
ಕೊರೊನಾ ವೈರಸ್ ಪ್ರೇರಿತ ಲಾಕ್‌ಡೌನ್ ಕಾರಣದಿಂದಾಗಿ ಕೇಂದ್ರ ತನಿಖಾ ದಳ (ಸಿಬಿಐ) ಈ ಬಗ್ಗೆ ಯಾವುದೇ ಶೋಧ ನಡೆಸಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.