ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತ್ತೀಚೆಗೆ ನಡೆಸಿದ್ದ ಎಸ್ಬಿಐನ ಕ್ಲರ್ಕ್ಸ್ ಪೂರ್ವಭಾವಿ ಪರೀಕ್ಷೆಯ ಫಲಿತಾಂಶವನ್ನು ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿದೆ.
2019ರ ಕ್ಲರ್ಕ್ಸ್ ಹುದ್ದೆಗಳಿಗಾಗಿ ಪರೀಕ್ಷೆ ತೆಗೆದುಕೊಂಡ ಅಭ್ಯರ್ಥಿಗಳು ಎಸ್ಬಿಐನ sbi.co.inಗೆ ಭೇಟಿ ನೀಡಿ ತಮ್ಮ ಫಲಿತಾಂಶ ತಿಳಿದುಕೊಳ್ಳಬಹುದು. ಈ ಪರೀಕ್ಷೆಯು ಕಳೆದ ಜೂನ್ 22, 23 ಮತ್ತು 30ರಂದು ನಡೆಸಲಾಗಿತ್ತು.
ನೇಮಕ ಪ್ರಕ್ರಿಯೆಯು ಮೂರು ಹಂತದಲ್ಲಿ ನಡೆಯಲಿದೆ. ಪ್ರಿಲಿಮಿನರಿ ಪರೀಕ್ಷೆ, ಮುಖ್ಯ ಪರೀಕ್ಷೆ ಮತ್ತು ಸಂದರ್ಶನ ಹಂತಗಳನ್ನು ಒಳಗೊಂಡಿದೆ. ಪ್ರಿಲಿಮಿನರಿಯಲ್ಲಿ ತೇರ್ಗಡೆಯಾದವರು ಮುಖ್ಯ ಪರೀಕ್ಷೆಗೆ ಅರ್ಹತೆ ಪಡೆಯಲಿದ್ದು, ವೆಬ್ಸೈಟ್ನಿಂದ ತೇರ್ಗಡೆಯ ಕಾಪಿ ಪಡೆದು ಹಾಜರಾಗಬೇಕು ಎಂದು ಎಸ್ಬಿಐ ತಿಳಿಸಿದೆ.
ಎಸ್ಬಿಐನ ಮುಖ್ಯ ಪರೀಕ್ಷೆಯು 2019ರ ಆಗಸ್ಟ್ 10ರಂದು ನಡೆಯಲಿದೆ. ಇದು ಕೂಡ ಕಂಪ್ಯೂಟರ್ ಆಧಾರಿತ ಬಹು ಆಯ್ಕೆಯ ಪ್ರಶ್ನೆಗಳನ್ನು ಹೊಂದಿರುತ್ತದೆ. ಮೇನ್ ಪರೀಕ್ಷೆಯು 2 ಗಂಟೆ ಮತ್ತು 40 ನಿಮಿಷಗಳಲ್ಲಿ ನಡೆಯಲಿದೆ. 190 ಅಂಕಗಳಲ್ಲಿ ಜನರಲ್, ಹಣಕಾಸಿನ ತಿಳಿವಳಿಕೆ, ಸಾಮಾನ್ಯ ಇಂಗ್ಲಿಷ್, ಪರಿಮಾಣಾತ್ಮಕ ಆಪ್ಟಿಟ್ಯೂಡ್ ಮತ್ತು ತಾರ್ಕಿಕ ಸಾಮರ್ಥ್ಯ ಹಾಗೂ ಕಂಪ್ಯೂಟರ್ ಜ್ಞಾನದ ಮೇಲೆ ಪ್ರಶ್ನೆಗಳನ್ನು ಕೇಳಲಾಗುತ್ತದೆ.
ಸಾಮಾನ್ಯ ಇಂಗ್ಲಿಷ್ ವಿಭಾಗದಲ್ಲಿ 40 ಪ್ರಶ್ನೆಗಳು ಮತ್ತು ಉಳಿದ ಮೂರು ವಿಭಾಗಗಳಲ್ಲಿ ತಲಾ 50 ಪ್ರಶ್ನೆಗಳಿರುತ್ತವೆ. ಪ್ರತಿಯೊಂದು ಪ್ರಶ್ನೆಯೂ ಒಂದು ಅಂಕವನ್ನು ಹೊಂದಿರುತ್ತದೆ. ಪ್ರತಿ ತಪ್ಪು ಉತ್ತರಕ್ಕಾಗಿ, ಒಂದು ಅಂಕದ ಕಾಲು ಭಾಗ ಕಡಿತಗೊಳ್ಳುತ್ತದೆ.