ನವದೆಹಲಿ: ಚೀನಾ ಉತ್ಪನ್ನಗಳನ್ನು ನಿಲ್ಲಿಸಿ ಸಾಮಾಜಿಕ ಜಾಲತಾಣದ ಅಭಿಯಾನ ಮಧ್ಯೆಯೂ ಚೀನಾದ ಸ್ಮಾರ್ಟ್‌ಫೋನ್ ತಯಾರಕ ಕಂಪನಿ ರಿಯಲ್ಮಿ ತನ್ನ ಮೊದಲ ಸ್ಮಾರ್ಟ್ ಟಿವಿಯನ್ನು 12,999 ರೂ.ಗಳ ಆರಂಭಿಕ ಬೆಲೆಯೊಂದಿಗೆ ಭಾರತೀಯ ಮಾರುಕಟ್ಟೆಗೆ ಇಂದು ಪ್ರವೇಶಿಸಿದ್ದು, ಆರಂಭಿಕ ವಹಿವಾಟಿನಲ್ಲಿ ಭರ್ಜರಿ ಮಾರಾಟ ಮಾಡಿದೆ.
''ಗಡಿಯಲ್ಲಿ ಚೀನೀ ಸೇನೆ ಅತಿಕ್ರಮಣ ಮಾಡಿ ಆಕ್ರಮಣಕಾರಿ ಧೋರಣೆ ಅನುಸರಿಸುತ್ತಿದೆ. ಭಾರತೀಯ ಸೇನೆ ಯೋಧರು ಅವರೊಂದಿಗೆ ಮುಖಾಮುಖಿ ಆಗಿದ್ದಾರೆ. ಇಂತಹ ಸನ್ನಿವೇಶದಲ್ಲಿ ಚೀನೀ ಉತ್ಪನ್ನಗಳನ್ನು ಖರೀದಿಸುವುದನ್ನು ನಿಲ್ಲಿಸೋಣ'' ಎಂದು ಅಮಿರ್ ಖಾನ್ ಅಭಿನಯದ 3 ಇಡಿಯಟ್ಸ್ ಸಿನಿಮಾಕ್ಕೆ ಪ್ರೇರಕ ಆಗಿದ್ದ ಸೋನಮ್ ವಾಂಗ್ಚುಕ್ ಅವರು, ಚೀನಾ ವಸ್ತುಗಳನ್ನು ಯಾಕೆ ಬಹಿಷ್ಕರಿಸಬೇಕು ಎಂಬುದನ್ನು ವಿಡಿಯೋದಲ್ಲಿ ವಿವರಿಸಿದ್ದರು. ಇದಕ್ಕೂ ಮೊದಲೇ ಬಾಯ್ಕಟ್ ಚೀನಾ ಪ್ರೋಡಕ್ಟ್ ಎಂಬ ಅಭಿಯಾನ ನೆಟ್ಟಗಿರು ಆರಂಭಿಸಿದ್ದರು. ಈ ಎಲ್ಲದರ ಮಧ್ಯೆಯೂ ಚೀನಾದ ರಿಯಲ್ ಮಿ ಭರ್ಜರಿ ಮಾರಾಟ ಮಾಡಿದ್ದು, ಭಾರತೀಯ ಸ್ಮಾರ್ಟ್ಟಿವಿ ಗ್ರಾಹಕರು ಮುಗಿಬಿದ್ದು ಖರೀದಿಸಿದ್ದಾರೆ.
ಮೀಡಿಯಾ ಟೆಕ್ 64- ಬಿಟ್ ಕ್ವಾಡ್ ಕೋರ್ ಪ್ರೊಸೆಸರ್ ಮತ್ತು ಡಾಲ್ಬಿ ಆಡಿಯೊ ಪ್ರಮಾಣಿತ 24 ಡಬ್ಲ್ಯೂ ಕ್ವಾಡ್ ಸ್ಟಿರಿಯೊ ಸ್ಪೀಕರ್‌ಗಳ ಎರಡು ರೂಪಾಂತರಗಳಲ್ಲಿ ಸ್ಮಾರ್ಟ್ಟಿವಿ ಪರಿಚಯಿಸಿದೆ. ರಿಯಲ್ಮಿ ಸ್ಮಾರ್ಟ್ಟಿವಿ 32 ಇಂಚು (ಎಚ್ಡಿ) 12,999 ರೂ ಮತ್ತು 43 ಇಂಚು ಟಿವಿಗೆ 21,999 ರೂ. ನಿಗದಿಪಡಿಸಿತ್ತು.
ಸ್ಮಾರ್ಟ್ ಟಿವಿಗಳನ್ನು ನೀಡುವ ನಮ್ಮ ಪ್ರಯತ್ನ ಇದೀಗ ಪ್ರಾರಂಭವಾಗಿದೆ. ನಾವು ಈ ಎರಡು ಗಾತ್ರಗಳಲ್ಲಿ ಮಾತ್ರ ಮಾರುಕಟ್ಟೆಯಲ್ಲಿ ನೆಲೆಗೊಳ್ಳುವುದಿಲ್ಲ. 55 ಇಂಚಿನ ಹೊಸ ಟಿವಿಯನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದೇವೆ ಎಂದು ರಿಯಲ್ ಮಿ ಇಂಡಿಯಾದ ಉಪಾಧ್ಯಕ್ಷ ಮಾಧವ್ ಶೆತ್ ಐಎಎನ್‌ಎಸ್‌ಗೆ ತಿಳಿಸಿದರು.
ಸಾಂಕ್ರಾಮಿಕ ಪರಿಸ್ಥಿತಿ ತಿಳಿಗೊಂಡ ಬಳಿಕ ಮೇಕ್ ಇನ್ ಇಂಡಿಯಾ ಅಭಿಯಾನದ ಭಾಗವಾಗಿ ಶೀಘ್ರದಲ್ಲೇ 100 ಪ್ರತಿಶತದಷ್ಟು ಸ್ಥಳೀಯ ಉತ್ಪಾದನೆಯನ್ನು ಪ್ರಾರಂಭಿಸಲು ನಾವು ಯೋಜಿಸುತ್ತಿದ್ದೇವೆ. ಭಾರತದಲ್ಲಿ ವಿಶ್ವ ದರ್ಜೆಯ ಉತ್ಪನ್ನಗಳನ್ನು ಭಾರತಕ್ಕಾಗಿ ತಯಾರಿಸುತ್ತೇವೆ ಎಂದು ಶೆತ್ ಹೇಳಿದರು.