ನವದೆಹಲಿ: ಮಾಹಿತಿ ಹಕ್ಕು ಕಾಯ್ದೆಯಡಿ (ಆರ್ಟಿಐ) ಬ್ಯಾಂಕುಗಳು ತಮ್ಮ ವಾರ್ಷಿಕ ತಪಾಸಣೆ ವರದಿಯ ಮಾಹಿತಿಯನ್ನು ಸಾರ್ವಜನಿಕರಿಗೆ ಬಹಿರಂಗಪಡಿಸುವಂತೆ ಸುಪ್ರೀಂಕೋರ್ಟ್ ಭಾರತೀಯ ರಿಸರ್ವ್ ಬ್ಯಾಂಕ್ಗೆ ಆದೇಶ ನೀಡಿದೆ.
ಸುಪ್ರೀಂಕೋರ್ಟ್ನ ನ್ಯಾ.ಎಲ್.ನಾಗೇಶ್ವರರಾವ್ ನೇತೃತ್ವದ ಪೀಠ, ಕಾನೂನಿನ ಚೌಕಟ್ಟಿನಡಿಯಲ್ಲಿ ವಿನಾಯಿತಿ ನೀಡದ ಹೊರತು ಆರ್ಬಿಐ ಮಾಹಿತಿ ಬಹಿರಂಗಪಡಿಸದೆ ಇರುವಂತಿಲ್ಲ. ಈ ಕುರಿತು ತನ್ನ ನೀತಿಯನ್ನು ಪರಾಮರ್ಶಿಸುವಂತೆಯೂ ಸೂಚಿಸಿದ್ದು, ಕಾನೂನಿನಡಿಯಲ್ಲಿ ಆದೇಶ ಪಾಲಿಸಬೇಕಾದದ್ದು ನಿಮ್ಮ ಕರ್ತವ್ಯವಾಗಿದೆ ಎಂದು ಎಚ್ಚರಿಸಿದೆ.
ಆರ್ಬಿಐ ವಿರುದ್ಧ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಈ ಬಾರಿ ಮುಂದುವರಿಸದ ಸುಪ್ರೀಂಕೋರ್ಟ್, ಕಾನೂನಿನ ಪಾರದರ್ಶಕತೆ ದೃಷ್ಟಿಯಿಂದ ವಾರ್ಷಿಕ ತಪಾಸಣೆ ವರದಿಯನ್ನು ಅನುಸರಿಸಲು ಆರ್‌ಬಿಐಗೆ ಕೊನೆ ಅವಕಾಶ ನೀಡಲಾಗುತ್ತದೆ ಎಂದು ಹೇಳಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಆರ್ಬಿಐ ವಿವರ ನೀಡದಿರುವ ಪ್ರಕರಣವನ್ನು ಕೋರ್ಟ್ ಗಂಭೀರವಾಗಿ ಪರಿಗಣಿಸಿದೆ. ಮುಂದಿನ ದಿನಗಳಲ್ಲಿ ಈ ಆದೇಶ ಉಲ್ಲಂಘಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದೂ ಎಚ್ಚರಿಕೆ ನೀಡಿದೆ.
ಕಳೆದ ಜನವರಿ ವೇಳೆ ಬ್ಯಾಂಕುಗಳ ವಾರ್ಷಿಕ ತಪಾಸಣೆ ವರದಿ ಬಹಿರಂಗಪಡಿಸದ ಆರ್‌ಬಿಐಗೆ ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಲಾಗಿತ್ತು.