ನವದೆಹಲಿ: ಖ್ಯಾತ ಉದ್ಯಮಿ ಮತ್ತು ಬಜಾಜ್ ಗ್ರೂಪ್ನ ಮುಖ್ಯಸ್ಥ ರಾಹುಲ್ ಬಜಾಜ್ ಅವರು ದೀರ್ಘಕಾಲದ ಅಧ್ಯಕ್ಷ ಹುದ್ದೆಯ ಕಾರ್ಯನಿರ್ವಾಹಕ ಸ್ಥಾನದಿಂದ ಕೆಳಗಿಳಿದು ಕಾರ್ಯನಿರ್ವಾಹಕವಲ್ಲದ ನಿರ್ದೇಶಕ ಸ್ಥಾನದಲ್ಲಿ ಮುಂದುವರಿಲಿದ್ದಾರೆ ಎಂದು ಕಂಪನಿ ತಿಳಿಸಿದೆ.
1970ರ ಎಪ್ರಿಲ್ 1ರಿಂದ ಕಂಪನಿಯ ನಿರ್ದೇಶಕರಾಗಿದ್ದ ಬಜಾಜ್ ಅವರನ್ನು 2015ರ ಎಪ್ರಿಲ್ 1ರಿಂದ ಐದು ವರ್ಷಗಳ ಕಾಲ ಕೊನೆಯ ಬಾರಿಗಾಗಿ ಮಂಡಳಿಯ ಕಾರ್ಯನಿರ್ವಾಹಕ ಹುದ್ದೆಗೆ ನೇಮಿಸಲಾಗಿತ್ತು. ಅವರ ಕಾರ್ಯನಿರ್ವಾಹಕ ಅಧ್ಯಕ್ಷತೆಯ ಅವಧಿಯು 2020ರ ಮಾರ್ಚ್ 31ಕ್ಕೆ ಕೊನೆಗೊಳ್ಳಲಿದೆ ಎಂದು ಕಂಪನಿಯು ನಿಯಂತ್ರಕ ಫೈಲಿಂಗ್ನಲ್ಲಿ ಹೇಳಿದೆ.
ಕೆಲವು ಬದ್ಧತೆಗಳು ಮತ್ತು ಇತರ ಪೂರ್ವಾಪರ ಉದ್ಯೋಗದಿಂದಾಗಿ ರಾಹುಲ್ ಬಜಾಜ್ ಅವರು 2020ರ ಮಾರ್ಚ್ 31ರಂದು ತಮ್ಮ ಪ್ರಸ್ತುತದ ಅವಧಿ ಮುಗಿದ ನಂತರ ಕಂಪನಿಯ ಪೂರ್ಣ ಸಮಯ ನಿರ್ದೇಶಕರಾಗಿ ಮುಂದುವರಿಯದಿರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದೆ.
ರಾಹುಲ್ ಬಜಾಜ್ ಅವರು 1965ರಲ್ಲಿ ಬಜಾಜ್ ಗ್ರೂಪ್ ವಹಿವಾಟಿನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದರು. ಅವರ ನಾಯಕತ್ವದಲ್ಲಿ ಬಜಾಜ್ ಆಟೋ, ಬಜಾಜ್ ಗ್ರೂಪ್ ಕಂಪನಿ ಉದ್ಯಮದ ಉತ್ತುಂಗಕ್ಕೆ ಏರಿದೆ. ಆಡಳಿತದ ಚುಕ್ಕಾಣಿ ಹಿಡಿದಾಗ ಕಂಪನಿಯ ಒಟ್ಟಾರೆ ವಹಿವಾಟು 7.2 ಕೋಟಿ ರೂ.ಯಷ್ಟಿತ್ತು. ಈಗ ಕಂಪನಿಯ ಒಟ್ಟಾರೆ ಬೆಳವಣಿಗೆಯು 12,000 ಕೋಟಿ ರೂ.ಗೆ ಬಂದು ತಲುಪಿದೆ.