ನವದೆಹಲಿ: ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು, 'ಏರ್ ಇಂಡಿಯಾ ಖಾಸಗೀಕರಣ ಮಾಡುವುದನ್ನು ಬಿಟ್ಟರೆ ಬೇರೆ ಯಾವುದೇ ಮಾರ್ಗ ಇಲ್ಲ' ಎಂದು ಅಸಹಾಯಕತೆ ವ್ಯಕ್ತಪಡಿಸಿದರು.
ನಾಗರಿಕ ವಿಮಾನಯಾನ ಕುರಿತು ನಡೆಸಿದ ಮಾಧ್ಯಮಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಚಿವರು, ವಿಮಾನಯಾನ ಬದುಕುಳಿಯಬೇಕಾದರೆ ಸರ್ಕಾರದ ಧನಸಹಾಯ ನೆಚ್ಚಿಕೊಂಡಿದ್ದರೆ ಸಾಲದು ಎಂದರು.
ಕೋವಿಡ್ -19 ಪ್ರೇರಿತ ಆರ್ಥಿಕ ಪ್ರಕ್ಷುಬ್ಧತೆಯಿಂದಾಗಿ ಕೇಂದ್ರವು ವಿಮಾನಯಾನ ಸಂಸ್ಥೆ ಬೆಂಬಲಿಸುವ ಸ್ಥಿತಿಯಲ್ಲಿ ಇಲ್ಲದಿರಬಹುದು. ಏಕೆಂದರೆ ಸಮಾಜದ ದುರ್ಬಲ ವರ್ಗಗಳ ಜನರನ್ನು ರಕ್ಷಿಸಲು ಬೃಹತ್ ಆರ್ಥಿಕ ಸಂಪನ್ಮೂಲಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.
ಯಾರ ಹೆಸರನ್ನೂ ಉಲ್ಲೇಖಿಸದ ಸಚಿವರು, ವಿಮಾನಯಾನವನ್ನು ಹೇಗೆ ನಿಭಾಯಿಸಬೇಕು ಎಂದು ತಿಳಿದಿರುವವರಿಗೆ ಬಿಟ್ಟುಕೊಡಬೇಕು ಎಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ರಾಜಕೀಯ ಪ್ರತಿಕ್ರಿಯೆಗಳಿಗೆ ಅವರು ಪ್ರತ್ಯುತ್ತರ ನೀಡಿದರು.