ಮುಂಬೈ: ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರ ಬ್ಯಾಂಕ್ ಲಿಮಿಟೆಡ್ (ಪಿಎಂಸಿ) ಬ್ಯಾಂಕ್ ಹಗರಣ ಮತ್ತೊಬ್ಬರನ್ನು ಬಲಿಪಡೆದುಕೊಂಡಿದೆ.
4,355 ಕೋಟಿ ರೂ.ಗಳ ಹಗರಣ ಬೆಳಕಿಗೆ ಬಂದ ನಂತರ ಮೃತಪಟ್ಟವರ ಸಂಖ್ಯೆ ಏಳಕ್ಕೆ ತಲುಪಿದೆ. 'ಪಿಎಂಸಿ ಬ್ಯಾಂಕ್ ಠೇವಣಿದಾರ ಕುಲದೀಪ್ ಕೌರ್ ವಿಗ್ (64) ಅವರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ' ಎಂದು ಕುಟುಂಬಸ್ಥರು ಆಪಾದಿಸಿದ್ದಾರೆ. ಬಹು ಸಾವಿರ ಕೋಟಿ ರೂ. ಹಗರಣ ಬೆಳಕಿಗೆ ಬಂದ ಬಳಿಕ ಆರ್ಬಿಐ, ನಗದು ಹಿಂಪಡೆಯಲು ನಿರ್ಬಂಧ ಹೇರಿತ್ತು.
ಬ್ಯಾಂಕಿನ ಹಣಕಾಸು ಬಿಕ್ಕಟ್ಟು ಪರಿಹರಿಸುವಂತೆ ಪಿಎಂಸಿ ಗ್ರಾಹಕರು ಪ್ರತಿಭಟನೆ ನಡೆಸುತ್ತಿದ್ದರು. ಇದೇ ಬ್ಯಾಂಕ್ನಲ್ಲಿ ಠೇವಣಿ ಇರಿಸಿರುವ ನವಿ ಮುಂಬೈ ಖಾರ್ಘರ್ ಸೆಕ್ಟರ್ 10ರ ನಿವಾಸಿ ಕೌರ್ ಅವರು ರಾತ್ರಿ ಮನೆಯಲ್ಲಿ ಕುಳಿತು ಟಿವಿಯಲ್ಲಿ ಈ ಪ್ರತಿಭಟನೆ ವೀಕ್ಷಿಸುತ್ತಿದ್ದರು. ಬ್ಯಾಂಕ್ನಲ್ಲಿರುವ ತನ್ನ ಠೇವಣಿ ಬಗ್ಗೆ ಆತಂಕಗೊಂಡು ತೀವ್ರವಾದ ಒತ್ತಡಕ್ಕೆ ಒಳಗಾಗಿ ಹೃದಯಘಾತಕ್ಕೆ ಈಡಾಗಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
15 ವರ್ಷಗಳಿಗಿಂತ ಹೆಚ್ಚು ಕಾಲ ಪಿಎಂಸಿ ಬ್ಯಾಂಕ್ನಲ್ಲಿ ಖಾತೆಗಳನ್ನು ಹೊಂದಿದ್ದೇವೆ. ಕೆಲವು ಸ್ಥಿರ ಠೇವಣಿಗಳನ್ನು ಇತ್ತೀಚೆಗೆ ನವೀಕರಿಸಲಾಗಿದೆ. ಕಳೆದ ಒಂದು ತಿಂಗಳಿಂದ ಈ ಹಗರಣ ಬೆಳಕಿಗೆ ಬಂದಿದೆ. ಇದು ನಮಗೆ ಆತಂಕ ಉಂಟುಮಾಡಿದೆ. ಆರೋಗ್ಯ ವಿಮೆ ನವೀಕರಿಸಲು ಹಣವಿಲ್ಲ. ಬ್ಯಾಂಕ್ ಬಿಕ್ಕಟ್ಟಿಗೆ ಇನ್ನೂ ಎಷ್ಟು ಜನ ಸಾಯಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.