ನವದೆಹಲಿ: ದೇಶದ ನಂಬರ್ ಒನ್ ಶ್ರೀಮಂತ ಉದ್ಯಮಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಒಡೆತನದ ಜಿಯೋ ನೆಟ್ವರ್ಕ್, ತನ್ನ ದರ ಸಮರದ ಮೂಲಕ ಭಾರತದ ಟೆಲಿಕಾಂ ಮಾರುಕಟ್ಟೆಯನ್ನು ಅಲುಗಾಡಿಸಿತ್ತು. ಅದರ ಡೇಟಾ ಜತೆಗೆ ಉಚಿತ ಕರೆ ಕೊಡುಗೆಗೆ ಪ್ರತಿ ಸ್ಪರ್ಧಿ ಕಂಪನಿಗಳು ನೆಲಕಚ್ಚಿದ್ದವು. ಇಂತಹ ಒಂದು ಮಾರುಕಟ್ಟೆ ಜಾದು ಸೃಷ್ಟಿಸಲು ಆನ್‌ಲೈನ್ ಕ್ಷೇತ್ರದತ್ತ ಅಂಬಾನಿ ದೃಷ್ಟಿ ನೆಟ್ಟಿದ್ದಾರೆ.
ಜಿಯೋ ಬಂದು ನಾಲ್ಕು ವರ್ಷಗಳ ನಂತರ, ದೇಶದ ಹೆಚ್ಚುತ್ತಿರುವ ಸ್ಪರ್ಧಾತ್ಮಕ ಇ-ಕಾಮರ್ಸ್ ಜಾಗದಲ್ಲಿ ತಮ್ಮ ಅಧಿಪತ್ಯ ಸಾಧಿಸಲು ಕಟ್ತ್ರೋಟ್ (ಅತ್ಯಂತ ಕಡಿಮೆ ದರ) ಬೆಲೆ ತಂತ್ರದ ಮೊರೆ ಹೋಗುತ್ತಿದ್ದಾರೆ.
ಭಾರತವು ದಸರಾ ಹಾಗೂ ದೀಪಾವಳಿ ಹಬ್ಬದ ಸೀಸನ್ನಲ್ಲಿ ಅತಿದೊಡ್ಡ ಪ್ರಮಾಣದಲ್ಲಿ ಶಾಪಿಂಗ್ ನಡೆಯುತ್ತದೆ. ದಸರಾ ಹಬ್ಬದ ಖರೀದಿ ಕೊಡುಗೆ ಮುಗಿದಿದ್ದು, ದೀಪಾವಳಿಯ ಹಬ್ಬದತ್ತ ಚಿಲ್ಲರೆ ವೆಬ್‌ಸೈಟ್‌ಗಳಾದ ಜಿಯೋಮಾರ್ಟ್ ಸೇರಿದಂತೆ ಅಮೆಜಾನ್.ಕಾಮ್ ಇಂಕ್ ಮತ್ತು ವಾಲ್ಮಾರ್ಟ್ ಇಂಕ್, ಫ್ಲಿಪ್‌ಕಾರ್ಟ್ ಆನ್‌ಲೈನ್ ಸರ್ವೀಸಸ್ ಪ್ರೈವೇಟ್ ಲಿಮಿಟೆಡ್ ಕಣ್ಣಿಟ್ಟಿವೆ.
ಸ್ಪರ್ಧೆ ಸಮರ ಹೆಚ್ಚಿಸುವ ಮೂಲಕ ಅಂಬಾನಿ ಒಡೆತನದ ಪೋರ್ಟಲ್‌ಗಳು ಸಕ್ಕರೆ ಮಿಠಾಯಿ, ಬಿರಿಯಾನಿ ಮೇಲೆ ಘಮಿಸುವ ಮಸಾಲೆ ಮಿಶ್ರಣಗಳಂತಹ ಇತರ ರಜಾದಿನಗಳ ಮೇಲೆ ಬ್ಲಾಕ್ಬಸ್ಟರ್ ರಿಯಾಯಿತಿ ನೀಡುತ್ತಿವೆ. ಇದು ಪ್ರತಿ ಸ್ಪರ್ಧಿ ಕಂಪನಿಗಳಿಗೆ ಬಿಸಿ ತುಪ್ಪವಾಗಿದೆ.
ರಿಲಯನ್ಸ್ ಡಿಜಿಟಲ್ ವೆಬ್‌ಸೈಟ್ ಕೆಲವು ಪ್ರಮುಖ ಸ್ಯಾಮ್‌ಸಂಗ್ ಸ್ಮಾರ್ಟ್‌ಫೋನ್‌ಗಳ ಮೇಲೆ ಪ್ರತಿಸ್ಪರ್ಧಿಗಳಿಗಿಂತ ಅಗ್ಗದ ಬೆಲೆಗೆ ಮಾರಾಟ ಮಾಡುತ್ತಿದೆ. ಇದರ ಜೊತೆಗೆ ಶೇ 40ರಷ್ಟು ರಿಯಾಯಿತಿ ಸಹ ನೀಡುತ್ತಿದೆ.
ಅಂಬಾನಿಯ ವಿಸ್ತಾರವಾದ ಸಂಘಟನೆಯಾದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ನಗದು ವಹಿವಾಟಿನೊಂದಿಗೆ ಹರಿದಾಡುತ್ತಿದೆ. ತನ್ನ ತಂತ್ರಜ್ಞಾನ ಉದ್ಯಮಕ್ಕಾಗಿ 20 ಶತಕೋಟಿ ಡಾಲರ್ ಸಂಗ್ರಹಿಸಿದ ನಂತರ, ಚಿಲ್ಲರೆ ಕ್ಷೇತ್ರದಲ್ಲಿ ಫಂಡ್ ಕಲೆಕ್ಷನ್ಗೆ ಕೈಹಾಕಿದೆ. ಇತ್ತೀಚಿನ ವಾರಗಳಲ್ಲಿ ಕೆಕೆಆರ್ & ಕಂಪನಿ ಮತ್ತು ಸಿಲ್ವರ್ ಲೇಕ್‌ನಂತಹ ಕಂಪನಿಗಳು 6 ಬಿಲಿಯನ್ ಡಾಲರ್ನಷ್ಟು ಹೂಡಿಕೆ ಮಾಡಿವೆ.
ದೊಡ್ಡ ಗ್ರಾಹಕ ಮಾರುಕಟ್ಟೆಗಳಲ್ಲಿ ಒಂದಾದ ಭಾರತವು, 2026ರ ವೇಳೆಗೆ ಇ-ಕಾಮರ್ಸ್ ಮಾರಾಟದಲ್ಲಿ 200 ಬಿಲಿಯನ್ ಡಾಲರ್ಗೆ ತಲುಪಲಿದೆ ಎಂದು ಅಂದಾಜಿಸಲಾಗಿದೆ. ದೂರಸಂಪರ್ಕದಲ್ಲಿ ಶತಕೋಟ್ಯಾಧಿಪತ್ಯದ ವಿಜಯ ಸಾಧಿಸಿದ ಅಂಬಾನಿ, ಪ್ರತಿಸ್ಪರ್ಧಿಗಳಿಗಿಂತ ಬೆಲೆ ಇಳಿಸುವ ಮೂಲಕ ನಿಯಂತ್ರಕ ಬದಲಾವಣೆಗಳನ್ನು ತಂದು ಲಾಭ ಮಾಡಿಕೊಳ್ಳಲು ಯತ್ನಿಸುತ್ತಿದ್ದಾರೆ. ಇದು ಅಮೆರಿಕಾದ ಇ-ಕಾಮರ್ಸ್ ದೈತ್ಯರಿಗೆ ಎಚ್ಚರಿಕೆಯ ಗಂಟೆಯಾಗಿದೆ.