ನವದೆಹಲಿ: ಭಾರತದ ಪ್ರಮುಖ ಕಾರು ತಯಾರಕಾ ಕಂಪನಿಯಾದ ಮಾರುತಿ ಸುಜುಕಿ, ಬ್ರೆಜ್ಜಾ ಮತ್ತು ಎಸ್-ಕ್ರಾಸ್ ಅನ್ನು ಬಿಎಸ್-6 ಪೆಟ್ರೋಲ್ ಆವೃತ್ತಿಯಲ್ಲಿ 2020ರ ಏಪ್ರಿಲ್ 1ಕ್ಕೂ ಮೊದಲ ಮಾರುಕಟ್ಟೆಗೆ ಪರಿಚಯಿಸಲಿದೆ ಎಂದು ಕಂಪನಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನೂತನ ಭಾರತ್ ಸ್ಟೇಜ್-6 (ಬಿಎಸ್) ಇಂಧನ ಹೊರಸೂಸುವಿಕೆಯ ಮಾನದಂಡಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರಲಿದೆ. ಹೀಗಾಗಿ, ಬಹುತೇಕ ಕಂಪನಿಗಳು ತಮ್ಮ ವಾಹನಗಳ ಇಂಧನ ಕಾರ್ಯಕ್ಷಮತೆ ತಂತ್ರಜ್ಞಾನವನ್ನು ಇದಕ್ಕೆ ಅನುಗುಣವಾಗಿ ಮೇಲ್ದರ್ಜೆಗೆ ಏರಿಸುತ್ತಿವೆ.
ದೇಶದ ವಾಹನ ಉದ್ಯಮವು ಮಂದಗತಿಯಿಂದ ಹೊರಬಂದಿದೆಯೇ ಎಂದು ಹೇಳಲು ವಾಹನ ತಯಾರಕರು ಇನ್ನು ಎರಡು- ಮೂರು ತಿಂಗಳು ಕಾಯಬೇಕಾಗುತ್ತದೆ ಎಂದು ಅಧಿಕಾರಿ ಸ್ಪಷ್ಟನೆ ನೀಡಿದ್ದಾರೆ.
ಕಂಪನಿಯು ಶೀಘ್ರದಲ್ಲೇ ಬ್ರೆಜ್ಜಾ ಮತ್ತು ಎಸ್- ಕ್ರಾಸ್ ಬಿಎಸ್ -6 ಸ್ಟ್ಯಾಂಡರ್ಡ್ನಡಿ ಪೆಟ್ರೋಲ್ ರೂಪಾಂತರದಲ್ಲಿ ಮಾರುಕಟ್ಟೆಗೆ ತರಲಿದೆ. ಹೊಗೆ ಹೊರಸೂಸುವಿಕೆಯ ನೂತನ ಮಾನದಂಡಗಳು 2020ರ ಏಪ್ರಿಲ್ 1ರಿಂದ ಜಾರಿಗೆ ಬರುತ್ತಿದೆ. ನಾವು ನಾಲ್ಕನೇ ತ್ರೈಮಾಸಿಕದಲ್ಲಿ (ಹಣಕಾಸು ವರ್ಷದ ಜನವರಿ- ಮಾರ್ಚ್) ಬಿಎಸ್ -6 ಪೆಟ್ರೋಲ್ ಶ್ರೇಣಿಯ ಬ್ರೆಜ್ಜಾ ಮತ್ತು ಎಸ್- ಕ್ರಾಸ್ ಅನ್ನು ಪರಿಚಯಿಸಲಿದ್ದೇವೆ ಎಂದು ಮಾರುತಿ ಸುಜುಕಿ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ (ಮಾರ್ಕೆಟಿಂಗ್) ಶಶಾಂಕ್ ಶ್ರೀವಾಸ್ತವ ಹೇಳಿದರು.
ಪ್ರಸ್ತುತ ಕಂಪನಿಯು ಬ್ರೆಜ್ಜಾ ಮತ್ತು ಎಸ್- ಕ್ರಾಸ್ನ ಡೀಸೆಲ್ ಶ್ರೇಣಿಯ ಕಾರುಗಳನ್ನು ಮಾತ್ರವೇ ಮಾರಾಟ ಮಾಡುತ್ತಿದೆ. ಮಾರುಕಟ್ಟೆ ಟ್ರೆಡಿಂಗ್ ಅನ್ನು ಗಮನದಲ್ಲಿ ಇರಿಸಿಕೊಂಡು ಬಿಎಸ್- 6 ಮಾನದಂಡಗಳಿಗೆ ಅನುಗುಣವಾಗಿ ಮಾರುಕಟ್ಟೆಗೆ ಬರಲಿದ್ದೇವೆ ಎಂದು ಹೇಳಿದರು.