ನವದೆಹಲಿ: ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (ಎಂಎಸ್‌ಐ) ಫೆಬ್ರವರಿ ಸಗಟು ಮಾರಾಟದಲ್ಲಿ ಶೇ 11.8ರಷ್ಟು ಏರಿಕೆ ಕಂಡಿದ್ದು, 1,64,469 ಯುನಿಟ್ ಮಾರಾಟವಾಗಿದೆ ಎಂದು ಕಂಪನಿ ಹೇಳಿದೆ.
ಕಳೆದ ವರ್ಷ ಫೆಬ್ರವರಿಯಲ್ಲಿ ಕಂಪನಿಯು 1,47,110 ಯುನಿಟ್ ಮಾರಾಟ ಮಾಡಿತ್ತು. ಈ ವರ್ಷ 1,64,469 ಯುನಿಟ್ ಮಾರಾಟ ಮಾಡಿದೆ ಎಂದು ಮಾರುತಿ ಸುಜುಕಿ ಇಂಡಿಯಾ (ಎಂಎಸ್ಐ) ಪ್ರಕಟಣೆಯಲ್ಲಿ ತಿಳಿಸಿದೆ.
ದೇಶೀಯ ಮಾರಾಟವು ಕಳೆದ ತಿಂಗಳು ಶೇ 11.8ರಷ್ಟು ಏರಿಕೆಯಾಗಿ 1,52,983ಕ್ಕೆ ತಲುಪಿದೆ. 2020ರ ಫೆಬ್ರವರಿಯಲ್ಲಿ 1,36,849 ಯುನಿಟ್ ಮಾರಾಟವಾಗಿತ್ತು. ಆಲ್ಟೊ ಮತ್ತು ಎಸ್-ಪ್ರೆಸ್ಸೊ ಒಳಗೊಂಡ ಮಿನಿ ಕಾರುಗಳ ಮಾರಾಟವು ಶೇ 12.9ರಷ್ಟು ಕುಸಿದು 23,959ಕ್ಕೆ ತಲುಪಿದೆ. ಕಳೆದ ವರ್ಷ ಇದೇ ತಿಂಗಳಲ್ಲಿ 27,499 ಯೂನಿಟ್ ಮಾರಾಟ ಆಗಿದ್ದವು.
ಇದನ್ನೂ ಓದಿ: ದೇಶದಲ್ಲಿ ಇಂದಿನಿಂದ ಬದಲಾಗುತ್ತಿವೆ ಈ 5 ನಿಯಮಗಳು: ಮಾರ್ಚ್ ಮೊದಲ ದಿನದಿಂದಲೇ ಬಿಗ್ ಶಾಕ್!
ಸ್ವಿಫ್ಟ್, ಸೆಲೆರಿಯೊ, ಇಗ್ನಿಸ್, ಬಾಲೆನೊ ಮತ್ತು ಡಿಸೈರ್ ಸೇರಿದಂತೆ ಕಾಂಪ್ಯಾಕ್ಟ್ ವಿಭಾಗದ ವಾಹನಗಳ ಮಾರಾಟವು ಶೇ 15.3ರಷ್ಟು ಏರಿಕೆಯಾಗಿ 80,517 ಯುನಿಟ್‌ಗಳಿಗೆ ತಲುಪಿದೆ. 2020ರ ಫೆಬ್ರವರಿಯಲ್ಲಿ 2,544 ಯುನಿಟ್‌ಗಳಿಗೆ ಹೋಲಿಸಿದರೆ ಮಧ್ಯಮ ಗಾತ್ರದ ಸೆಡಾನ್ ಸಿಯಾಜ್ ಮಾರಾಟವು ಶೇ 40.6ರಷ್ಟು ಇಳಿದು 1,510 ಯೂನಿಟ್ಗೆ ತಲುಪಿದೆ.
ವಿಟಾರಾ ಬ್ರೆಝಾ, ಎಸ್-ಕ್ರಾಸ್ ಮತ್ತು ಎರ್ಟಿಗಾ ಸೇರಿದಂತೆ ಯುಟಿಲಿಟಿ ವಾಹನಗಳ ಮಾರಾಟವು ಶೇ 18.9ರಷ್ಟು ಏರಿಕೆ ಕಂಡು 26,884 ಯೂನಿಟ್ಗೆ ತಲುಪಿದೆ. ಹಿಂದಿನ ವರ್ಷ 22,604 ಯುನಿಟ್‌ಗಳು ಮಾರಾಟ ಆಗಿದ್ದವು. ಫೆಬ್ರವರಿಯಲ್ಲಿ ರಫ್ತು ಶೇ 11.9ರಷ್ಟು ಏರಿಕೆಯಾಗಿ 11,486 ಯುನಿಟ್ ಆಗಿದ್ದು, ಕಳೆದ ವರ್ಷ ಇದೇ ಅವಧಿಯಲ್ಲಿ 10,261 ಯುನಿಟ್ ಮಾರಾಟವಾಗಿದ್ದವು ಎಂದು ಕಂಪನಿ ತಿಳಿಸಿದೆ.