ನವದೆಹಲಿ : ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ 17 ವರ್ಷಗಳ ಹಿಂದಿನ ಗರಿಷ್ಠ ನಷ್ಟವನ್ನು ಪ್ರಸಕ್ತ ಆರ್ಥಿಕ ವರ್ಷದ ಮೊದಲ ತ್ರೈಮಾಸಿಕದಲ್ಲಿ ವರದಿ ಮಾಡಿದೆ.
ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ 268.3 ಕೋಟಿ ರೂ.ಯಷ್ಟು ಆದಾಯ ನಷ್ಟ ಎದುರಾಗಿದೆ. 2003ರ ಜುಲೈನಲ್ಲಿ ಆಟೋ ಮೇಜರ್ ಈ ಮಟ್ಟದ ನಷ್ಟ ಅನುಭವಿಸಿತ್ತು.
2019-20ರ ಏಪ್ರಿಲ್-ಜೂನ್ ತ್ರೈಮಾಸಿಕದಲ್ಲಿ 1,376.8 ಕೋಟಿ ರೂ. ನಿವ್ವಳ ಲಾಭ ದಾಖಲಿಸಿತ್ತು. ಮೊದಲ ತ್ರೈಮಾಸಿಕದಲ್ಲಿ ನಿವ್ವಳ ಮಾರಾಟವು 3,679 ಕೋಟಿ ರೂ.ಗೆ ಇಳಿದಿದೆ. ಹಿಂದಿನ ವರ್ಷದ ಅವಧಿಯಲ್ಲಿ ಇದು 18,738.8 ಕೋಟಿ ರೂ.ಗಳಷ್ಟಿತ್ತು ಎಂದು ಎಂಎಸ್ಐ ಪ್ರಕಟಣೆಯಲ್ಲಿ ತಿಳಿಸಿದೆ.
ಸ್ವತಂತ್ರ ಆಧಾರದ ಮೇಲೆ ಕಂಪನಿಯು ಜೂನ್ 30ಕ್ಕೆ ಕೊನೆಗೊಂಡ ಮೊದಲ ತ್ರೈಮಾಸಿಕದಲ್ಲಿ 249.4 ಕೋಟಿ ರೂ. ಆದಾಯ ಕಳೆದುಕೊಂಡಿದೆ. ಇದು 2019-20ರ ಏಪ್ರಿಲ್-ಜೂನ್‌ನಲ್ಲಿ 1,435.5 ಕೋಟಿ ರೂ. ಇದ್ದಿತ್ತು.
ಪರಿಶೀಲನೆಯ ಅವಧಿಯಲ್ಲಿ ಆಟೋ ಮೇಜರ್‌ನ ನಿವ್ವಳ ಮಾರಾಟವು 3,677.5 ಕೋಟಿ ರೂ.ಗೆ ಇಳಿದಿದೆ. ಇದು ಹಿಂದಿನ ವರ್ಷದಲ್ಲಿ 18,735.2 ಕೋಟಿ ರೂ.ನಷ್ಟಿತ್ತು. ಮೊದಲ ತ್ರೈಮಾಸಿಕದಲ್ಲಿ ಎಂಎಸ್‌ಐ ಒಟ್ಟು 76,599 ವಾಹನಗಳನ್ನು ಮಾರಾಟ ಮಾಡಿದೆ. ದೇಶಿಯ ಮಾರುಕಟ್ಟೆಯಲ್ಲಿ 67,027 ಹಾಗೂ ರಫ್ತು 9,572 ಯುನಿಟ್ಗಳಷ್ಟಿದೆ. ಈ ಹಿಂದಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಕಂಪನಿಯು 4,02,594 ಯುನಿಟ್ ಮಾರಾಟ ಮಾಡಿದೆ.
ಕೋವಿಡ್-19ರ ಸಾಂಕ್ರಾಮಿಕ ರೋಗದಿಂದಾಗಿ ಕಂಪನಿಯ ಇತಿಹಾಸದಲ್ಲಿ ಅಭೂತಪೂರ್ವ ತ್ರೈಮಾಸಿಕ ಕುಸಿತ ಕಂಡಿದೆ. ತ್ರೈಮಾಸಿಕದ ಹೆಚ್ಚಿನ ಭಾಗವು ಸರ್ಕಾರ ನಿಗದಿಪಡಿಸಿದ ಲಾಕ್‌ಡೌನ್ ನಿಯಮಗಳಿಗೆ ಅನುಸಾರವಾಗಿ ಶೂನ್ಯ ಉತ್ಪಾದನೆ ಮತ್ತು ಶೂನ್ಯ ಮಾರಾಟ ಮಾಡಿತ್ತು ಎಂದು ಎಂಎಸ್‌ಐ ಹೇಳಿದೆ.