ಮುಂಬೈ: ಲಕ್ಷ್ಮಿ ವಿಲಾಸ್ ಬ್ಯಾಂಕ್ ಮಂಡಳಿಯು ಇಂಡಿಯಾ ಬುಲ್ಸ್ ಹೌಸಿಂಗ್ ಫೈನಾನ್ಸ್ (ಐಬಿಎಚ್) ಜೊತೆಗಿನ ವಿಲೀನಕ್ಕೆ ಹಸಿರು ನಿಶಾನೆ ತೋರಿದೆ.
ಈ ವಿಲೀನ ಪ್ರಕ್ರಿಯೆ ಇಂಡಿಯಾ ಬುಲ್ಸ್ನ ಕಡಿಮೆ ವೆಚ್ಚದ ಸ್ಥಿರ ನಿಧಿ ಮತ್ತು ಬ್ಯಾಂಕಿಂಗ್ ವಲಯದ ಪ್ರವೇಶಕ್ಕೆ ಸಹಾಯವಾಗಲಿದೆ. ರಾಷ್ಟ್ರದ ಎರಡನೇ ಅತಿದೊಡ್ಡ ಹೌಸಿಂಗ್ ಫೈನಾನ್ಸ್ ಸಂಸ್ಥೆಯು, 2013ರಲ್ಲಿ ಬ್ಯಾಂಕಿಂಗ್ ಪರವಾನಿಗೆಗೆ ಅರ್ಜಿ ಗುಜರಾಯಿಸಿತ್ತು. ಆದರೆ, ಲೈಸನ್ಸ್ ಪಡೆಯುವಲ್ಲಿ ವಿಫಲವಾಯಿತು.
ವಿಲೀನಗೊಂಡ ಬಳಿಕ ಒಟ್ಟು ನಿವ್ವಳ ಮೌಲ್ಯ ₹ 19,472 ಕೋಟಿ ಮತ್ತು ಸಾಲದ ಪ್ರಮಾಣ ₹ 1, 23,393 ಕೋಟಿ ಆಗುತ್ತದೆ. ಇದು 2019ರ ಹಣಕಾಸು ವರ್ಷದಲ್ಲಿನ ಒಂಬತ್ತು ತಿಂಗಳವರೆಗಿನ ಮೊತ್ತವಾಗಿದೆ. ಸಂಸ್ಥೆಯ ಸಿಬ್ಬಂದಿ ಬಲ 14,300ಕ್ಕೂ ಅಧಿಕವಾಗಲಿದೆ.
ಒಟ್ಟೂಗೂಡಿದ ನಂತರ ಐಬಿಎಚ್ ಶೇ 90.5ರಷ್ಟು ಷೇರುಗಳನ್ನು ಹೊಂದಿದರೆ ಉಳಿಕೆಯ ಶೇ 9.45ರಷ್ಟು ಷೇರು ಎಲ್ವಿಬಿ ಪಾಲಾಗಲಿದೆ. ಇಂಡಿಯಾ ಬುಲ್ಸ್ ಸಂಸ್ಥಾಪಕ/ ಅಧ್ಯಕ್ಷ ಸಮೀರ್ ಗೆಹ್ಲುಟ್ ಅವರ ಷೇರು ಪಾಲು ಶೇ 21.5ರಿಂದ 19.5ಕ್ಕೆ ಇಳಿಯಲಿದೆ.
ವಸತಿ ಹಣಕಾಸು ಕಂಪನಿಗಳು ನಗದು ಸಮಸ್ಯೆಗಳನ್ನು ಎದುರಿಸುತ್ತಿವೆ. ಸಾಲದ ಸುಳಿಯಲ್ಲಿ ಸಿಲುಕಿದ್ದ ಇನ್ಫ್ರಾಸ್ಟ್ರಕ್ಚರ್ ಲೀಸಿಂಗ್ ಆಂಡ್ ಫೈನಾನ್ಶಿಯಲ್ ಸರ್ವೀಸಸ್ (ಐಎಲ್ ಆಂಡ್ ಎಫ್‌ಎಸ್) ನಡೆ ಹೌಸಿಂಗ್ ಫೈನಾನ್ಸ್ ಸಂಸ್ಥೆಗಳಿಗೆ ಒಂದು ಪಾಠವಾಗಿದೆ. ಇದರ ಜೊತೆಗೆ ಸಾಲ ವಿತರಣೆ ಸಹ ನಿಧಾನವಾಗುತ್ತಿದೆ. ಹೀಗಾಗಿ, ಈ ವಿಲೀನ ಉಭಯ ಸಂಸ್ಥೆಗಳಿಗೆ ಮಹತ್ವದಾಗಿದೆ.