ಮುಂಬೈ: ಆದಿತ್ಯ ಬಿರ್ಲಾ ಸಮೂಹದ ಅಧ್ಯಕ್ಷ ಕುಮಾರ್ ಮಂಗಳಂ ಬಿರ್ಲಾ ವೊಡಾಫೋನ್ ಐಡಿಯಾ ಲಿಮಿಟೆಡ್‌ನ ಕಾರ್ಯನಿರ್ವಾಹಕೇತರ ನಿರ್ದೇಶಕ ಮತ್ತು ಕಾರ್ಯನಿರ್ವಾಹಕೇತರ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ. ಈ ನಿಟ್ಟಿನಲ್ಲಿ ರಾಜೀನಾಮೆ ನೀಡುವ ಬಿರ್ಲಾ ನಿರ್ಧಾರವನ್ನು ಮಂಡಳಿಯು ಅನುಮೋದಿಸಿದೆ.
ವೊಡಾಫೋನ್ ಐಡಿಯಾ ಲಿಮಿಟೆಡ್‌ನ ನಿರ್ದೇಶಕರ ಮಂಡಳಿಯು ಇಂದು ನಡೆದ ಸಭೆಯಲ್ಲಿ ಕುಮಾರ್ ಮಂಗಳಂ ಬಿರ್ಲಾ ಅವರ ಕಾರ್ಯನಿರ್ವಾಹಕೇತರ ನಿರ್ದೇಶಕರು (ನಾನ್ ಎಕ್ಸಿಕ್ಯೂಟೀವ್ ಡೈರೆಕ್ಟರ್) ಮತ್ತು ನಿರ್ವಾಹಕೇತರ ಅಧ್ಯಕ್ಷ (ನಾನ್ ಎಕ್ಸಿಕ್ಯೂಟೀವ್ ಚೇರ್ಮನ್) ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ ಮನವಿಯನ್ನು ಸ್ವೀಕರಿಸಿರುವುದಾಗಿ ರೆಗ್ಯುಲೇಟರಿ ಫೈಲಿಂಗ್‌ನಲ್ಲಿ ಕಂಪನಿ ತಿಳಿಸಿದೆ. ಇಂದಿನಿಂದಲೇ ವ್ಯವಹಾರದ ಜವಾಬ್ದಾರಿಯಿಂದ ಬಿಡುಗಡೆಯಾಗಿದ್ದಾರೆ.
ಮಂಡಳಿಯು ಸರ್ವಾನುಮತದಿಂದ ಹಿಮಾಂಶು ಕಪಾನಿಯಾ ಅವರನ್ನು ಪ್ರಸ್ತುತ ಕಾರ್ಯನಿರ್ವಾಹಕೇತರ ನಿರ್ದೇಶಕರು ಹಾಗೂ ಕಾರ್ಯನಿರ್ವಾಹಕೇತರ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದೆ.
ಇದನ್ನೂ ಓದಿ: ವೊಡಾಫೋನ್ ಐಡಿಯಾದ ಪಾಲನ್ನು ಸರ್ಕಾರಕ್ಕೆ ನೀಡಲು ಮುಂದಾದ ಕೆ ಎಂ ಬಿರ್ಲಾ ; ಮುಂದೇನು?
ಕಂಪನಿಯು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಬಿರ್ಲಾ ಸರ್ಕಾರಕ್ಕೆ ಬರೆದ ಪತ್ರವು ಒಂದೆರಡು ದಿನಗಳ ನಂತರ ಈ ಬೆಳವಣಿಗೆಯಾಗಿದೆ. ಬಿರ್ಲಾ ಅವರು ಕಳೆದ ತಿಂಗಳು ಕ್ಯಾಬಿನೆಟ್ ಕಾರ್ಯದರ್ಶಿ ರಾಜೀವ್ ಗೌಬಾಗೆ ಬರೆದ ಪತ್ರದಲ್ಲಿ, ಸಾಲದ ಹೊರೆ ಹೊತ್ತ ವೊಡಾಫೋನ್ ಐಡಿಯಾ ಲಿಮಿಟೆಡ್ (ವಿಐಎಲ್) ನಲ್ಲಿ ತನ್ನ ಪಾಲನ್ನು ಸರ್ಕಾರಕ್ಕೆ ಅಥವಾ ಕಂಪನಿಯು ಕಾರ್ಯನಿರ್ವಹಿಸಲು ಯೋಗ್ಯವೆಂದು ಪರಿಗಣಿಸುವ ಯಾವುದೇ ಇತರ ಸಂಸ್ಥೆಗೆ ಹಸ್ತಾಂತರಿಸಲು ಅವರು ಮುಂದಾಗಿದ್ದರು.
ಅಧಿಕೃತ ದತ್ತಾಂಶಗಳ ಪ್ರಕಾರ, ವಿಐಎಲ್ 58,254 ಕೋಟಿ ರೂ.ಗಳ ಹೊಂದಾಣಿಕೆಯ ಒಟ್ಟು ಆದಾಯ (ಎಜಿಆರ್) ಹೊಣೆಗಾರಿಕೆಯನ್ನು ಹೊಂದಿದ್ದು, ಅದರಲ್ಲಿ ಕಂಪನಿಯು 7854.37 ರೂ. ಕೋಟಿಗಳನ್ನು ಪಾವತಿಸಿದೆ ಮತ್ತು 50,399.63 ಕೋಟಿ ರೂ. ಬಾಕಿ ಉಳಿದಿದೆ. ವಿಐಎಲ್ ಜೊತೆಗೆ ಭಾರ್ತಿ ಏರ್ಟೆಲ್ ಸರ್ಕಾರದ ಲೆಕ್ಕಾಚಾರದಲ್ಲಿ ತಿದ್ದುಪಡಿಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು. ಆದರೆ, ಮನವಿಯನ್ನು ತಿರಸ್ಕರಿಸಲಾಯಿತು. ವಿಐಎಲ್‌ನಲ್ಲಿ ಸುಮಾರು 27 ಪ್ರತಿಶತದಷ್ಟು ಷೇರುಗಳನ್ನು ಹೊಂದಿರುವ ಬಿರ್ಲಾ, ಹೊಂದಾಣಿಕೆಯ ಒಟ್ಟು ಆದಾಯದ ಹೊಣೆಗಾರಿಕೆಯಲ್ಲಿ ಸ್ಪಷ್ಟನೆ ಇಲ್ಲದ ಕಾರಣ ಹೂಡಿಕೆದಾರರು ಕಂಪನಿಯಲ್ಲಿ ಬಂಡವಾಳ ಹೂಡಿಕೆಗೆ ಆಸಕ್ತಿ ತೋರುತ್ತಿಲ್ಲ ಎಂದು ಹೇಳಿದ್ದರು.