ನವದೆಹಲಿ: ಭಾರತೀಯ ರೈಲ್ವೆ ಇಲಾಖೆಯು ಪರಿಸರ ಸ್ನೇಹಿಯಾದ ಮಹತ್ವದ ತೀರ್ಮಾನ ತೆಗೆದುಕೊಂಡಿದ್ದು, 'ರೈಲ್ವೆಯಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಲು ನಿರ್ಧರಿಸಿದೆ' ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು 73ನೇ ಸ್ವಾತಂತ್ರ್ಯ ದಿನಾಚರಣೆಯಂದು ದೆಹಲಿಯ ಕೆಂಪು ಕೋಟೆಯ ಮೇಲೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ, 'ದೇಶದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡೋಣ. ಡಿಜಿಟಲ್ ಹಣ ವರ್ಗಾವಣೆ ಬೆಂಬಲಿಸೋಣ' ಎಂದು ಕರೆ ನೀಡಿದ್ದರು.
ಈ ಬಗ್ಗೆ ಎಚ್ಚೆತ್ತುಕೊಂಡ ರೈಲ್ವೆ ಇಲಾಖೆ ತನ್ನ ಎಲ್ಲ ವಲಯಗಳಿಗೆ ಅಧಿಸೂಚನೆ ಕಳುಹಿಸಿ, 'ತಮ್ಮ ವ್ಯಾಪ್ತಿಯ ರೈಲ್ವೆ ನಿಲ್ದಾಣಗಳಲ್ಲಿ 50 ಮೈಕ್ರಾನ್ ಪ್ರಮಾಣಕ್ಕಿಂತಲೂ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಚೀಲ ಬಳಕೆಯನ್ನು ನಿಷೇಧಗೊಳಿಸಿ. ಸೆಪ್ಟೆಂಬರ್ 2ರಿಂದ ಜಾರಿಗೆ ಬರುವಂತೆ' ಆದೇಶಿಸಿದೆ.
ಅಧಿಸೂಚನೆಯ ಜೊತೆಗೆ ಕೆಲವು ಸಲಹೆ ಮತ್ತು ನಿಯಮಗಳನ್ನು ಘೋಷಿಸಿದೆ
1. ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯ ನಿಲ್ದಾಣಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸದಂತೆ ನಿಷೇಧ ಹೇರಲಾಗಿದೆ
2. ಭಾರತೀಯ ರೈಲ್ವೆ ಇಲಾಖೆ ವ್ಯಾಪ್ತಿಯಲ್ಲಿನ ಮಾರಾಟಗಾರರು ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್‌ಗಳನ್ನು ಬಳಸಬಾರದು
3. ಪ್ಲಾಸ್ಟಿಕ್ ಉತ್ಪನ್ನಗಳ ಕಡಿಮೆ, ಮರುಬಳಕೆಗೆ ಮತ್ತು ಪ್ಲಾಸ್ಟಿಕ್ ಸ್ವೀಕಾರ ನಿರಾಕರಿಸುವಂತೆ ಭಾರತೀಯ ರೈಲ್ವೆಯ ಸಿಬ್ಬಂದಿಗೆ ನಿರ್ದೇಶಿಸಲಾಗಿದೆ
4. ಪ್ಲಾಸ್ಟಿಕ್ ಬದಲಿಗೆ ಅಗ್ಗದ ಮರುಬಳಕೆ ಚೀಲಗಳನ್ನು ಬಳಸಬಹುದು
5. ಐಆರ್‌ಸಿಟಿಸಿಯು ಬಳಸಿದ ಪ್ಲಾಸ್ಟಿಕ್ ಬಾಟಲ್ಗಳನ್ನು ಪ್ಯಾಸೆಂಜರ್ಗಳಿಂದ ಮರಳಿ ಪಡೆಯುವ ವ್ಯವಸ್ಥೆ ಜಾರಿಗೆ ತರಲಿದೆ
6. ರೈಲ್ವೆ ನಿಲ್ದಾಣ ಮತ್ತು ಆವರಣಗಳಲ್ಲಿ ಪ್ಲಾಸ್ಟಿಕ್ ಬಾಟಲ್ಗಳನ್ನು ಪುಡಿಮಾಡುವ ಯಂತ್ರಗಳನ್ನು ತ್ವರಿತವಾಗಿ ಸ್ಥಾಪಿಸಲಾಗುವುದು