ನವದೆಹಲಿ: ನಾಪತ್ತೆಯಾದ ಉದ್ಯಮಿ ಸಿದ್ಧಾರ್ಥ್ ಅವರ ಶೋಧ ಕಾರ್ಯವು ಕಳೆದ 24 ಗಂಟೆಗಳಿಂದ ನಿರಂತರವಾಗಿ ಸಾಗಿದ್ದು, ಈ ನಡುವೆ ಬಯೊಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಐಟಿ ನಡೆಯನ್ನು ಖಂಡಿಸಿದ್ದಾರೆ.
ಖಾಸಗಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹಣಕಾಸು ಸಂಬಂಧಿತ ತನಿಖೆಗಳ ಬಗ್ಗೆ ಮಾತನಾಡಿದ ಷಾ, 'ಭಾರತ ಲೈಸನ್ಸ್ ರಾಜ್ನಿಂದ ಇನ್ಸ್ಪೆಕ್ಟರ್ ರಾಜ್ದತ್ತ ಸಾಗುತ್ತಿದೆ. ಇದು ಭಾರತೀಯ ಉದ್ಯಮ ವಲಯವನ್ನು ಗಂಭೀರವಾಗಿ ಬಾಧಿಸಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ರು.
'ತೆರಿಗೆ ಇಲಾಖೆಯ ಹಿಂದಿನ ಡಿಜಿಯಿಂದ ನನಗೆ ಕಿರುಕುಳ ಉಂಟಾಗಿದೆ' ಎಂದು ಪತ್ರದಲ್ಲಿ ಉಲ್ಲೇಖಿಸಿ ನಾಪತ್ತೆಯಾದ ಕಾಫಿ ಡೇ ಮಾಲೀಕ ಸಿದ್ಧಾರ್ಥ್ ಅವರು ಆರೋಪಿಸಿದ್ದರು.
ಸಿದ್ಧಾರ್ಥ್ ಅವರ ಆಪ್ತ ಸ್ನೇಹಿತೆ ಮತ್ತು ಬೆಂಗಳೂರಿನ ಉದ್ಯಮಿ ಮಜುಂದಾರ್ ಅವರು ದಿಢೀರ್ ನಾಪತ್ತೆ ಬಗ್ಗೆ ತೀವ್ರ ಆಘಾತ ವ್ಯಕ್ತಪಡಿಸಿದರು. 'ಅವರ ಪತ್ರದಲ್ಲಿನ ಬರಹ ಮತ್ತು ತೆಗೆದುಕೊಂಡ ಕ್ರಮವು ಅಸಹಾಯಕತೆ ಹಾಗೂ ಅವರ ಆರ್ಥಿಕತೆಯ ಹತಾಶತೆಯ ಪ್ರತಿಬಿಂಬವಾಗಿದೆ. ಹೀಗಾಗಿ, ಅವರು ಇಂತಹ ಪರಿಸ್ಥಿತೆಗೆ ಬಂದಿರಬಹುದು' ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ವಿಷಯದಲ್ಲಿ ಅವನು ಒಬ್ಬಂಟಿಯಾಗಿಲ್ಲ ಎಂದು ನನಗೆ ಖಾತ್ರಿಯಿದೆ. ಅನೇಕ ಕಂಪನಿಗಳು ಒಂದೇ ರೀತಿಯ ಐಟಿ ಮತ್ತು ಇಡಿ ತನಿಖೆಯನ್ನು ಎದುರಿಸುತ್ತಿವೆ. ಖಾಸಗಿ ಈಕ್ವಿಟಿ ಪಾಲುದಾರರಿಂದ ಇದೇ ರೀತಿಯ ಹಗೆತನವನ್ನು ಎದುರಿಸುತ್ತಿವೆ ಎಂದರು.