ನವದೆಹಲಿ: ಮತದಾನದ ಹೊಸ್ತಿಲಲ್ಲಿ ಪ್ರಧಾನಿ ನರೇಂದ್ರ ಮೋದಿ ತಮ್ಮ ಅಧಿಕಾರಾವಧಿಯಲ್ಲಿ ವಿದೇಶ ಪ್ರವಾಸ ಕೈಗೊಂಡ ವಿಮಾನಯಾನದ ವೆಚ್ಚದ ಮಾಹಿತಿ ಬಹಿರಂಗವಾಗಿದೆ.
ಪ್ರಧಾನಿ ಕಾರ್ಯಾಲಯದ ಮಾಹಿತಿ ಪ್ರಕಾರ, ಪ್ರಧಾನಿ ತಮ್ಮ ಅವಧಿಯಲ್ಲಿ (2014ರ ಮೇ- ಇಲ್ಲಿಯವರೆಗೂ) 44 ದೇಶಗಳಿಗೆ ಭೇಟಿ ನೀಡಿದ್ದಾರೆ. ಯುಪಿಎ ಎರಡನೇ ಅವಧಿಯಲ್ಲಿ (2009-14) ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರು 38 ಬಾರಿ ವಿದೇಶಿ ಪ್ರವಾಸ ಮಾಡಿದ್ದಾರೆ. ಇದಕ್ಕೆ ತಗುಲಿದ ವೈಮಾನಿಕ ವೆಚ್ಚ ₹ 493.2 ಕೋಟಿ ರು ಆಗಿತ್ತು.
ಆದರೆ, ಪ್ರಧಾನಿ ಮೋದಿಯವರು 44 ಬಾರಿ ವಿದೇಶಿ ಪ್ರವಾಸ ಕೈಗೊಂಡಿದ್ದರೂ ಖರ್ಚಾಗಿದ್ದು ₹ 443.4 ಕೋಟಿ ರೂಪಾಯಿ. ಆದರೆ, ಮಾಜಿ ಪ್ರಧಾನಿ ಸಿಂಗ್ ಅವರು ಮೋದಿಗಿಂತ ಕಡಿಮೆ ದೇಶಗಳಿಗೆ ಪ್ರವಾಸ ಕೈಗೊಂಡಿದ್ದರೂ 50 ಕೋಟಿ ರೂಪಾಯಿ ಹೆಚ್ಚು ಖರ್ಚು ಮಾಡಿದ್ದಾರೆ. ವಿದೇಶಿ ಪ್ರವಾಸಗಳ ವೇಳೆ ಮೋದಿ ಏಕಕಾಲದಲ್ಲಿ ಅನೇಕ ರಾಷ್ಟ್ರಗಳಿಗೆ ಭೇಟಿ ಮಾಡುವುದರಿಂದ ಅವರ ವಿದೇಶ ಪ್ರವಾಸದಲ್ಲಿನ ಒಟ್ಟಾರೆ ವೆಚ್ಚದಲ್ಲಿ ಇಳಿಕೆ ಕಂಡುಬಂದಿದೆ.
ಮೋದಿ ತಮ್ಮ ಇತರೆ ಆರು ಅಂತಾರಾಷ್ಟ್ರೀಯ ಪ್ರವಾಸಕ್ಕೆ ಏರ್ ಇಂಡಿಯಾ ವಿಮಾನ ಬದಲಿಗೆ ಭಾರತೀಯ ವಾಯುಪಡೆಯ ಕಮರ್ಷಿಯಲ್ ಜೆಟ್ನ ಸೇವೆ ಪಡೆದಿದ್ದಾರೆ. ಇದು ಕೂಡ ಅವರ ವಿದೇಶ ಪ್ರಯಾಣದ ವೆಚ್ಚ ಕಡಿಮೆ ಆಗಲು ಪ್ರಮುಖ ಕಾರಣ.
ಜೊತೆಗೆ ನರೇಂದ್ರ ಮೋದಿ, ಬೋಯಿಂಗ್ 737 ಕಮರ್ಷಿಯಲ್ ಜೆಟ್ನಲ್ಲಿ ಬಾಂಗ್ಲಾ, ನೇಪಾಳ, ಇರಾನ್ ಮತ್ತು ಸಿಂಗಾಪುರಕ್ಕೆ ಭೇಟಿ ನೀಡಿದ್ದರು. ಆದರೆ, ಮನಮೋಹನ್ ಸಿಂಗ್ ತಮ್ಮ ಅಧಿಕಾರಾವಧಿಯಲ್ಲಿ ಏಷ್ಯಾ, ದಕ್ಷಿಣ ಏಷ್ಯಾದ ಬಾಂಗ್ಲಾದೇಶ, ಸಿಂಗಾಪುರದಂತಹ ಸಮೀಪದ ದೇಶಗಳಿಗೂ ಏರ್ ಇಂಡಿಯಾ ವಿಮಾನಗಳನ್ನೇ ಬಳಸುತ್ತಿದ್ದರು.
ಪ್ರಧಾನಿಯ ವಿದೇಶಿ ಪ್ರಯಾಣದ ವೆಚ್ಚದಲ್ಲಿ ವಿಮಾನದ ಇಂಧನ, ಸಿಬ್ಬಂದಿಯ ವೆಚ್ಚವೂ ಸೇರಿರುತ್ತದೆ.