ನವದೆಹಲಿ: ಭಾರತದಲ್ಲಿ 2020ರ ಎಪ್ರಿಲ್ 1ರಿಂದ ಭಾರತ್ ಸ್ಟೇಜ್-6 (ಬಿಎಸ್-6) ವಾಯುಮಾಲಿನ್ಯ ಪರಿಮಾಣ ನಿಯಮ ಜಾರಿಯಾಗುತ್ತಿದ್ದು, ಇದರ ಮಾನದಂಡಗಳಿಗೆ ಅನುಗುಣವಾಗಿ ಹೋಂಡಾ 'ಸಿಟಿ ಕಾರು' ಅನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ.
ಹೋಂಡಾ ಕಾರ್ಸ್ ಇಂಡಿಯಾ ಲಿಮಿಟೆಡ್ (ಎಚ್ಸಿಐಎಲ್), ಸಂಪೂರ್ಣ ಬಿಎಸ್-6 ಶ್ರೇಣಿಯ ಸೆಡನ್ ಹ್ಯುಂಡೈ ಸಿಟಿ ಕಾರು ಅನ್ನು ಮಂಗಳವಾರ ಬಿಡುಗಡೆ ಮಾಡಿದೆ. ಆರಂಭಿಕ ಬೆಲೆಯು ₹ 9.91 ಲಕ್ಷದಿಂದ ₹ 14.31 ಲಕ್ಷದವರೆಗೆ (ದೆಹಲಿ ಎಕ್ಸ್ ಶೋರೂಮ್) ನಿಗದಿಪಡಿಸಿದೆ.
ಪೆಟ್ರೋಲ್ ಶ್ರೇಣಿಯಲ್ಲಿ ಬಿಡುಗಡೆಯಾದ ಸಿಟಿ ಕಾರು, ಮ್ಯಾನ್ಯುವಲ್ ಮತ್ತು ಆಟೋಮೆಟಿಕ್ ಮಾದರಿಯಲ್ಲಿ ಲಭ್ಯ ಇದೆ. ಮುಂದಿನ ದಿನಗಳಲ್ಲಿ ಡೀಸೆಲ್ ಮಾದರಿಯ ಕಾರುಗಳನ್ನು ಪರಿಚಯಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಕಾರಿನ ವಿ, ವಿಎಕ್ಸ್ ಮತ್ತು ಝಡ್ ಎಕ್ಸ್ ರೂಪಾಂತರಗಳಲ್ಲಿ ಡಿಜಿಪ್ಯಾಡ್ 2.0 ಸುಧಾರಿತ ಇನ್ಫೋಟೈನ್ಮೆಂಟ್ ಸಿಸ್ಟಮ್ ಅನ್ನು ಅಳವಡಿಸಿದೆ. ಇದು 17.7 ಸೆಂ.ಮೀ. ಸುಧಾರಿತ ಟಚ್ ಸ್ಕ್ರೀನ್ ಆಡಿಯೋ, ವಿಡಿಯೋ ಮತ್ತು ನ್ಯಾವಿಗೇಷನ್ ಸಿಸ್ಟಮ್ ಜತೆಗೆ ಆ್ಯಪಲ್ ಕಾರ್ಪ್ಲೇ ಮತ್ತು ಆಂಡ್ರಾಯ್ಡ್ ಆಟೋ ಮೂಲಕ ಸ್ಮಾರ್ಟ್ ಫೋನ್ ಸಂಪರ್ಕ ಪಡೆಯಬಹುದಾಗಿದೆ ಎಂದು ಕಂಪನಿ ತಿಳಿಸಿದೆ.