ನವದೆಹಲಿ: ಷೇರು ವಿನಿಮಯ ಕೇಂದ್ರಗಳಲ್ಲಿ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ನೀಡಿದ ಬಳಿಕವೂ ಎಲ್‌ಐಸಿಯ ನಿರ್ವಹಣಾ ನಿಯಂತ್ರಣವನ್ನು ಸರ್ಕಾರ ತನ್ನ ಬಳಿಯಲ್ಲಿ ಉಳಿಸಿಕೊಳ್ಳಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದರು.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಸಚಿವೆ, ಎಲ್ಐಸಿ ಪಾಲಿಸಿದಾರರ ಹಿತಾಸಕ್ತಿಯನ್ನು ಕಾಪಾಡಲು ಸರ್ಕಾರ ಬದ್ಧವಾಗಿದೆ. ಷೇರು ವಿನಿಮಯ ಕೇಂದ್ರಗಳಲ್ಲಿನ ಕಂಪನಿಗಳ ಪಟ್ಟಿಯು ಕಂಪನಿಯನ್ನು ಶಿಸ್ತುಬದ್ಧಗೊಳಿಸುತ್ತದೆ. ಹಣಕಾಸು ಮಾರುಕಟ್ಟೆಗಳಿಗೆ ಪ್ರವೇಶ ನೀಡುತ್ತದೆ. ಅದರ ಮೌಲ್ಯವನ್ನು ಸ್ಥಿರಗೊಳಿಸುವಂತೆ ಮಾಡುತ್ತದೆ ಎಂದರು.
ಇದು ಚಿಲ್ಲರೆ ಹೂಡಿಕೆದಾರರಿಗೆ ಉತ್ತಮ ಅವಕಾಶ ನೀಡುತ್ತದೆ. ಅಗತ್ಯ ಕಾನೂನು ಬದಲಾವಣೆ ಮತ್ತು ನಿಯಂತ್ರಣ ಅನುಮೋದನೆಗಳ ನಂತರ ಐಪಿಒಅನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.
ಸರ್ಕಾರವು ಎಲ್ಐಸಿಯಲ್ಲಿ ಬಹುಪಾಲು ಷೇರುದಾರನಾಗಿ ಉಳಿಯುತ್ತದೆ. ಪಾಲಿಸಿದಾರರ ಹಿತಾಸಕ್ತಿ ಕಾಪಾಡುವ ನಿರ್ವಹಣಾ ನಿಯಂತ್ರಣವನ್ನು ಉಳಿಸಿಕೊಳ್ಳುತ್ತದೆ ಎಂದು ಸೀತಾರಾಮನ್ ತಿಳಿಸಿದ್ದಾರೆ.