ನವದೆಹಲಿ: ಭಾರತೀಯ ರೈಲ್ವೆ ಇಲಾಖೆ ಸರಕು ಮತ್ತು ಪ್ರಯಾಣಿಕರ ಟಿಕೆಟ್ ದರವನ್ನು 'ತರ್ಕಬದ್ಧಗೊಳಿಸುವ' ಪ್ರಕ್ರಿಯೆಯಲ್ಲಿದೆ ಎಂದು ರೈಲ್ವೆ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ತಿಳಿಸಿದ್ದಾರೆ.
ಮಾಧ್ಯಮ ಸಭೆಯಲ್ಲಿ ಮಾತನಾಡಿದ ಅವರು, ಕ್ಷೀಣಿಸುತ್ತಿರುವ ಆದಾಯವನ್ನು ಮೇಲೆತ್ತಲು ಹಲವಾರು ಉಪಕ್ರಮಗಳನ್ನು ಪ್ರಾರಂಭಿಸಿದ್ದರೂ ದರಗಳನ್ನು ಹೆಚ್ಚಿಸುವುದು 'ಸೂಕ್ಷ್ಮ' ವಿಷಯವಾಗಿದೆ. ಈ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ದೀರ್ಘವಾಗಿ ಚರ್ಚಿಸಬೇಕಾಗಿದೆ ಎನ್ನುತ್ತಲೇ ಟಿಕೆಟ್ ದರ ಏರಿಕೆಯ ಸುಳಿವು ನೀಡಿದ್ದಾರೆ.
ಸರಕು ಹಾಗೂ ಪ್ರಯಾಣಿಕ ದರಗಳನ್ನು ತರ್ಕಬದ್ಧಗೊಳಿಸಲಿದ್ದೇವೆ. ನಾನು ಈ ಬಗ್ಗೆ ಹೆಚ್ಚಿನದ್ದು ಬಹಿರಂಗಪಡಿಸಲು ಸಾಧ್ಯವಿಲ್ಲ. ಇದು ಸೂಕ್ಷ್ಮವಾದ ವಿಷಯವಾಗಿದೆ. ಸರಕು ಸಾಗಣೆ ದರಗಳು ಈಗಾಗಲೇ ಹೆಚ್ಚಾಗಿದ್ದರೂ ರಸ್ತೆಯಿಂದ ರೈಲ್ವೆಯತ್ತ ಹೆಚ್ಚಿನ ದಟ್ಟಣೆಯನ್ನು ಸೆಳೆಯುವುದು ನಮ್ಮ ಗುರಿಯಾಗಿದೆ ಎಂದು ಹೇಳಿದರು.
ಆರ್ಥಿಕ ಕುಸಿತದಿಂದ ಭಾರತೀಯ ರೈಲ್ವೆ ತೀವ್ರವಾಗಿ ತತ್ತರಿಸಿದೆ. ರಾಷ್ಟ್ರೀಯ ಸಾರಿಗೆದಾರ ರೈಲ್ವೆ ಇಲಾಖೆಗೆ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಪ್ರಯಾಣಿಕ ಮತ್ತು ಸರಕು ಸಾಗಾಣೆಯಿಂದ ₹ 155 ಕೋಟಿ ಹಾಗೂ ₹ 3,901 ಕೋಟಿ ಆದಾಯ ಬಂದಿದೆ ಎಂದು ಇತ್ತೀಚೆಗೆ ಆರ್ಟಿಐ ಅರ್ಜಿಯಲ್ಲಿ ಕೇಳಲಾದ ಪ್ರಶ್ನೆಗೆ ರೈಲ್ವೆಯು ಉತ್ತರಿಸಿತ್ತು.